ಬೆಳಗಾವಿ: ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಮ್ ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನು ರೈಲು ಹಳಿ ಬಳಿ ಎಸೆದಿರುವ ದಾರುಣ ಘಟನೆ ಬೆಳಗಾವಿ ಜೆಲ್ಲೆಯ ಖಾನಪುರದಲ್ಲಿ ನಡೆದಿದೆ.
28 ವರ್ಷ ಪ್ರಾಯದ ಅರ್ಬಾಝ್ ಅವರ ಶಿರಚ್ಛೇದಿತ ಮೃತದೇಹ ಖಾನಾಪುರದ ರೈಲು ಹಳಿ ಬಳಿ ಪತ್ತೆಯಾಗಿವೆ. ಕೈ ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಕೊಲೆಗೈಯ್ದಿರುವುದು ಕಂಡುಬಂದಿದೆ.
ಸೆಪ್ಟಂಬರ್ 28ರಂದು ಅರ್ಬಾಝ್ ಅವರನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಕೈ ಕಾಲುಗಳನ್ನು ಕಟ್ಟಿ ರೈಲು ಬರುವ ಸಮಯ ನೋಡಿಕೊಂಡು ರೈಲು ಹಳಿ ಮೇಲೆ ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೆಪ್ಟಂಬರ್ 28ರಂದು ರಾಮ ಸೇನೆಯ ಕಾರ್ಯಕರ್ತರು ನನ್ನ ಸಹೋದರನಿಗೆ ಕರೆ ಮಾಡಿ ಕರೆದಿದ್ದರು. ಅವರನ್ನು ಭೇಟಿ ಮಾಡಲು ಅರ್ಬಾಝ್ ತೆರಳಿದ್ದ. ಗಂಟೆಗಳ ನಂತರ ರೈಲ್ವೆ ಪೊಲೀಸರು ನಮಗೆ ಕರೆ ಮಾಡಿ, ಅರ್ಬಾಝ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಆತನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ಕೈ ಕಾಲುಗಳನ್ನು ಕಟ್ಟಲಾಗಿತ್ತು ಎಂದು ಅರ್ಬಾಝ್ ಅವರ ಸಹೋದರ ಸಮೀರ್ ಪರಸ್ವಾಡಿ ತಿಳಿಸಿದ್ದಾರೆ.
ರಾಮ ಸೇನೆ ಸೇರಿದಂತೆ ಹಿಂದುತ್ವ ಗುಂಪುಗಳಿಂದ ನನ್ನ ಸಹೋದರನಿಗೆ ಬೆದರಿಕೆಯಿತ್ತು.
ಈ ಬಗ್ಗೆ ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ ಮತ್ತು ಹಿಂದೂ ಹುಡುಗಿ ನಡುವೆ ಪ್ರೇವವಿತ್ತು. ಇದರಿಂದ ಆತನಿಗೆ ರಾಮಸೇನೆಯಿಂದ ಬೆದರಿಕೆ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.