ಮುಂಬೈ: ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ಅಪ್ಪನ ಸ್ವತ್ತೂ ಅಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಕರ್ನಾಟಕ ಕಾನೂನು ಸಚಿವ ಜೆ. ಮಧುಸ್ವಾಮಿ ಅವರು ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ ಹೇಳಿಕೆ ನೀಡಿದ್ದರು.
ಈ ಕುರಿತು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಕ್ರಿಯೆ ನೀಡಿರುವ ಫಡ್ನವೀಸ್, ಈ ಬಗ್ಗೆ ಮಹಾರಾಷ್ಟ್ರವು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಿದೆ. ಇಂತಹ ಕೂಗುಮಾರಿಗಳಿಗೆ ಛೀಮಾರಿ ಹಾಕುವಂತೆ ಕೇಂದ್ರ ಸಚಿವ ಶಾ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ , ಗಡಿ ಬಿಕ್ಕಟ್ಟು ಸುಮಾರು 66 ವರ್ಷಗಳಷ್ಟು ಹಳೆಯದು. ಶಿವಸೇನಾ ವರಿಷ್ಠರಾಗಿದ್ದ ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಜೊತೆ ಕೆಲಸ ಮಾಡಿದ್ದೇನೆ. ಬಾಳಾಸಾಹೇಬ್ ಅವರ ಸೂಚನೆ ಮೇರೆಗೆ ನಾವು ಬೆಳಗಾವಿಗೆ ಹೋಗಿ ಪ್ರತಿಭಟನೆ ನಡೆಸಿದ್ದೆವು. ಆಗ ನಮ್ಮನ್ನು ಬಂಧಿಸಿ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಪೊಲೀಸ್ ಪ್ರಕರಣಗಳಿಗೆಲ್ಲಾ ನಾವು ಹೆದರುವುದಿಲ್ಲ’ ಎಂದು ಹೇಳಿದರು.
ಕರ್ನಾಟಕದ ಸಿಎಂ ಮತ್ತು ಸಚಿವರು ತಮ್ಮ ಹೇಳಿಕೆಗಳಿಂದ ಮಹಾರಾಷ್ಟ್ರದ ಹೆಮ್ಮೆಗೆ ಧಕ್ಕೆ ತಂದಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಪ್ರತಿಕ್ರಿಯೆ ಅದೇ ರೀತಿಯಲ್ಲಿ ಇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.