ಬಿಜೆಪಿ ಮುಖಂಡ ಮುಕುಲ್‌ ರಾಯ್‌ ಟಿಎಂಸಿಗೆ ಮರುಸೇರ್ಪಡೆ | ಇನ್ನಷ್ಟು ಬಿಜೆಪಿಗರು ಮಮತಾ ಬ್ಯಾನರ್ಜಿ ಪಕ್ಷಕ್ಕೆ”ಘರ್‌ವಾಪ್ಸಿ”

Prasthutha|

ಕೊಲ್ಕತಾ : ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಶಾಸಕ ಮುಕುಲ್‌ ರಾಯ್‌ ಮತ್ತು ಅವರ ಮಗ, ಮಾಜಿ ಟಿಎಂಸಿ ಶಾಸಕ ಸುಭ್ರಾಂಗ್ಷು ಶುಕ್ರವಾರ ಮತ್ತೆ ಟಿಎಂಸಿ ಸೇರ್ಪಡೆಯಾಗಿದ್ದಾರೆ.  ಮುಕುಲ್‌ ರಾಯ್‌ ಇಂದು ಟಿಎಂಸಿ ಕಚೇರಿಗೆ ಆಗಮಿಸುವ ಬಗ್ಗೆ ಸಾಕಷ್ಟು ಊಹಾಪೋಹಗಳು  ಎದ್ದಿದ್ದವು. ಇದೀಗ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲೇ ಮುಕುಲ್‌ ರಾಯ್‌ ಮತ್ತು ಅವರ ಮಗ ಟಿಎಂಸಿ ಮರುಸೇರ್ಪಡೆಗೊಂಡಿದ್ದಾರೆ.

- Advertisement -

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಮತ್ತು ಇತರ ಹಿರಿಯ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಮುಕುಲ್‌ ರಾಯ್‌ ಇಂದು ತಮ್ಮ ಮೂಲಕ್ಕೆ ಬಂದಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಚುನಾವಣೆಯ ವೇಳೆ ಅವರು ಯಾವುದೇ ಟಿಎಂಸಿ ವಿರೋಧಿ ಹೇಳಿಕೆಗಳನ್ನು ನೀಡಿರಲಿಲ್ಲ. ತಮ್ಮ ಹಳೆಯ ಪಕ್ಷಕ್ಕೆ ಬರುವ ಮೂಲಕ ಅವರು ನೆಮ್ಮದಿಯನ್ನು ಕಂಡುಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಯ್‌ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ನನ್ನ ಮಾಜಿ ಸಹೋದ್ಯೋಗಿಗಳ ಜೊತೆಗೆ ಸೇರಿದ ಬಳಿಕ ನೆಮ್ಮದಿಯ ಭಾವನೆ ಮೂಡಿದೆ. ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ತನ್ನ ಭವ್ಯ ಪರಂಪರೆಗೆ ಮರಳಲಿದೆ. ನಾನು ಬಿಜೆಪಿ ಯಾಕೆ ತೊರೆದೆ ಎಂಬುದರ ಬಗ್ಗೆ ಲಿಖಿತ ಹೇಳಿಕೆ ನೀಡುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಯಾರೂ ಬಿಜೆಪಿಯಲ್ಲಿ ಉಳಿಯಲು ಬಯಸುವುದಿಲ್ಲ ಎಂದು ಮುಕುಲ್‌ ರಾಯ್‌ ಪಕ್ಷ ಸೇರ್ಪಡೆ ಬಳಿಕ ಮಾತನಾಡುತ್ತಾ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಹಲವು ನಾಯಕರು, ಮತ್ತೆ ದೊಡ್ಡ ಸಂಖ್ಯೆಯಲ್ಲಿ ತಮ್ಮ ಮಾತೃಪಕ್ಷಕ್ಕೆ ವಾಪಾಸ್‌ ಆಗಲಿದ್ದಾರೆ ಎನ್ನಲಾಗುತ್ತಿದೆ.



Join Whatsapp