ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ತರಾತುರಿ ಸಿಐಡಿ ತನಿಖೆಯ ಬದಲು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆಲುವರಾಯಸ್ವಾಮಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ತೆಗೆದುಕೊಂಡ ಪ್ರಕರಣದಲ್ಲಿ ತರಾತುರಿಯಲ್ಲಿ ನಡೆಸುತ್ತಿರುವ ಸಿಐಡಿ ತನಿಖೆ ಗಮನಿಸಿದರೆ ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡುವ ಇಂಗಿತ ಸರ್ಕಾರಕ್ಕಿದ್ದಂತಿದೆ ಎಂದು ತಿಳಿಸಿದರು.
” ಸಿಐಡಿ ಅಧಿಕಾರಿಗಳು ಕೃಷಿ ಇಲಾಖೆಯ ಅಧಿಕಾರಿಗಳನ್ನು ಬೇಟಿ ಮಾಡಿರುವುದು ಹಾಗೂ ಮೈಸೂರಿನಲ್ಲಿ ಅಂಚೆ ಪೆಟ್ಟಿಗೆಯ ಬಳಿ ತನಿಖೆ ಮಾಡುತ್ತಿರುವುದನ್ನು ಗಮನಿಸಿದರೆ ಸಚಿವರನ್ನು ಪ್ರಕರಣದಿಂದ ಮುಕ್ತಗೊಳಿಸುವುದೇ ಸರ್ಕಾರದ ಉದ್ದೇಶವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದಲ್ಲಿ ಮಾತ್ರ ಸಚಿವರ ಲಂಚಾವತಾರ ಬೆಳಕಿಗೆ ಬರುತ್ತದೆ. ಸರ್ಕಾರ ಈ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಲಿ” ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಪಡಿಸಿದರು.
ಗುತ್ತಿಗೆದಾರರುಗಳ ಸಂಸಾರಗಳು ವಿಷ ಕುಡಿಯುವ ಪರಿಸ್ಥಿತಿಗೆ ತಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ
ಮುಂದುವರಿದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ”ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 80 ದಿವಸಗಳಾಗಿದೆ. ಈ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರದ 40% ಹಗರಣವನ್ನು ಮುಂದಿಟ್ಟುಕೊಂಡು, ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನೆಲ್ಲ ಕದ್ದು, ತನ್ನ ಗ್ಯಾರಂಟಿಗಳಿಗಾಗಿ ಪರಿಶಿಷ್ಟರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾ , ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ಈಗ ಗುತ್ತಿಗೆದಾರರುಗಳ ಬಾಕಿ ಬಿಲ್ ಪಾವತಿಗೆ 15 % ಪರ್ಸೆಂಟ್ ಗಾಗಿ ನಾಚಿಕೆಯಿಲ್ಲದೆ ಬೇಡಿಕೆ ಇಡುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಕಂಡಿಶನ್ ಸರ್ಕಾರದಿಂದಾಗಿ ರಾಜ್ಯದ ಗುತ್ತಿಗೆದಾರರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿರುವುದು ಈ ರಾಜ್ಯದ ದುರಂತ. ಆಮ್ ಆದ್ಮಿ ಪಕ್ಷವು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.