ಏಷ್ಯನ್ ಅರಬ್ ಚೇಂಬರ್ ಆಫ್ ಕಾಮರ್ಸ್ ಟ್ರೇಡ್ ಕಮಿಷನರ್ ಆಗಿ ಮುಹಮ್ಮದ್ ಹಾರಿಸ್

Prasthutha|

ಹೊಸದಿಲ್ಲಿ: ಏಷ್ಯನ್ ಅರಬ್ ಚೇಂಬರ್ ಆಫ್ ಕಾಮರ್ಸ್ (ಎಎಸಿಸಿ) ಬುಧವಾರ ಸದಸ್ಯ ರಾಷ್ಟ್ರಗಳ ಒಮ್ಮತದ ಮೂಲಕ ಗ್ಲೋಬಲ್ ಅರಬ್ ನೆಟ್’ವರ್ಕ್’ಗೆ ಕರ್ನಾಟಕದಿಂದ ಕೆ. ಮುಹಮ್ಮದ್ ಹಾರಿಸ್ ಅವರನ್ನು ಟ್ರೇಡ್ ಕಮಿಷನರ್ ( ವಾಣಿಜ್ಯ ಆಯುಕ್ತರಾಗಿ) ಆಗಿ ನೇಮಿಸಿದೆ.

- Advertisement -


ಎಎಸಿಸಿ ಮುಖ್ಯ ಕಚೇರಿ ದೋಹಾದಲ್ಲಿದ್ದು, ಸಂಸ್ಥೆಯ ಅಧ್ಯಕ್ಷ ಸಾದ್ ಅಲ್ ದಬ್ಬಾಗ್, ಹಾರಿಸ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಹಾರಿಸ್ ಅವರು “ಭಾರತ-ಯುಎಇ ನಡುವಿನ ಸಂಬಂಧಗಳು ವೇಗವಾಗಿ ಬೆಳೆಯುತ್ತಿವೆ. ಪರಸ್ಪರ ಸಹಕಾರ ಹಾಗೂ ಹೂಡಿಕೆಗೆ ಮೂಲಸೌಕರ್ಯ ಹಾಗೂ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಈ ವ್ಯಾಪಾರ ಸಂಬಂಧಗಳನ್ನು ಉತ್ತೇಜಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕಾಗಿದೆ” ಎಂದು ಹೇಳಿದ್ದಾರೆ.


ಹಾರಿಸ್ ಅವರ ನೇಮಕದ ಬಗ್ಗೆ ಮಾತನಾಡಿದ ಭಾರತ ಸರ್ಕಾರದ ಮಾಜಿ ರಕ್ಷಣಾ ಮತ್ತು ಕೃಷಿ ರಾಜ್ಯ ಸಚಿವ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೃಷ್ಣಕುಮಾರ್ ಅವರು “ಉದ್ಯಮ ರಂಗದಲ್ಲಿ ಮುಕ್ಕ ಸೀ ಫುಡ್ ಎಕ್ಸ್ಪೋರ್ಟ್ ನ ಮುಹಮ್ಮದ್ ಹಾರಿಸ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅವರು ಮೀನುಗಾರಿಕೆ ಮತ್ತು ಸಾಗರೋತ್ಪನ್ನಗಳ ವ್ಯವಹಾರದಲ್ಲಿ ಸುಮಾರು ಎರಡು ದಶಕಗಳಿಂದ ಅತ್ಯಂತ ಯಶಸ್ವೀ ಉದ್ಯಮಿಯಾಗಿದ್ದಾರೆ. ಉದ್ಯಮ ರಂಗದಲ್ಲಿ ನಾವೀನ್ಯತೆ ಮೂಲಕ ಅವರು ಹೊಸ ಅವಕಾಶಗಳನ್ನು ಸೃಷ್ಟಿಸಿದ್ದಾರೆ. ವಿವಿಧ ಉದ್ಯಮ ಒಪ್ಪಂದಗಳ ಮೂಲಕ ಅವರು ಭಾರತೀಯ ಉದ್ಯಮಿಗಳಿಗೆ ಯುಎಇಯಲ್ಲಿ ಸರಕು ಮತ್ತು ಸೇವೆಗಳನ್ನು ತಲುಪಿಸಲು, ನಮ್ಮ ಆರ್ಥಿಕತೆಯನ್ನು ಬಲಪಡಿಸಲು ಮತ್ತು ವಿದೇಶದಲ್ಲಿ ನಮ್ಮ ನಾಯಕತ್ವವನ್ನು ಭದ್ರಪಡಿಸಲು ಬಾಗಿಲು ತೆರೆದಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -


ಟ್ರೇಡ್ ಕಮಿಷನರ್ ಆಗಿ ಮಂಡಳಿಗೆ ಹಾರೀಸ್ ಅವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ, ಅವರ ಅನುಭವ ಮತ್ತು ಶ್ರೇಷ್ಠತೆಯನ್ನು ಸಾಧಿಸುವ ಬದ್ಧತೆಯು ಜಾಗತಿಕ ಉದ್ಯಮ ಸಂಸ್ಥೆಗಳಿಗೆ ಮತ್ತು ವಿಶೇಷವಾಗಿ ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ವಾಣಿಜ್ಯ ಬಾಂಧವ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಹಾರಿಸ್ ಅವರು ಹಲವು ಉದ್ಯಮ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಎಎಸಿಸಿ ಅಧ್ಯಕ್ಷ ಸಾದ್ ಅಲ್ ದಬಾಗ್ ಹೇಳಿದ್ದಾರೆ.
ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಅನೇಕ ಸದಸ್ಯತ್ವಗಳೊಂದಿಗೆ ವೈವಿಧ್ಯತೆಯನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ವ್ಯಾಪಾರ ಆಯೋಗದ ಮುಖ್ಯಸ್ಥರಾಗಿ ಭಾರತೀಯರಾದ ಹಾರಿಸ್ ನೇಮಕವಾಗಿರುವುದು ನಿಜಕ್ಕೂ ಮಹತ್ವದ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಏಷ್ಯನ್ ಅರಬ್ ಚೇಂಬರ್ ಆಫ್ ಕಾಮರ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಕೆ ಮುಹಮ್ಮದ್ ಹಾರಿಸ್ ಅವರು ಮಂಗಳೂರಿನ ಪ್ರತಿಷ್ಠಿತ ಮುಕ್ಕ ಸೀ ಫುಡ್ಸ್ ಎಕ್ಸ್ ಪೋರ್ಟ್ಸ್ ನ ಆಡಳಿತ ನಿರ್ದೇಶಕ ಹಾಗು ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್ ಸೇವಾ ಕಂಪೆನಿ ಶಿಪ್ ವೇವ್ಸ್’ನ ಸಹ ಸ್ಥಾಪಕರಾಗಿದ್ದಾರೆ. ಜಾಗತಿಕ ಆಮದು ಹಾಗು ರಫ್ತು ಉದ್ಯಮ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಲೌಡ್ ಹಾಗು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಭಾರತದ ಪ್ರಪ್ರಥಮ ಸ್ಟೀಮ್ ಸ್ಟೆರಿಲೈಸ್ಡ್ ( ಸೋಂಕು ರಹಿತ) ಫಿಶ್ ಮೀಲ್ ಘಟಕ ಸ್ಥಾಪಿಸಿ ವಿವಿಧ ದೇಶಗಳಲ್ಲಿ ಅದರ ಎಂಟು ಘಟಕಗಳನ್ನು ಸ್ಥಾಪಿಸಿದ್ದಾರೆ. ಇಂದು ಏಷ್ಯಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಶ್ ಮೀಲ್ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಕ್ಕ ಸೀ ಫುಡ್ಸ್ ವಾರ್ಷಿಕ 600 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಹಾರಿಸ್ ಅವರು ಹಲವು ಸಮಾಜ ಸೇವಾ ಹಾಗು ವಾಣಿಜ್ಯ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರೇಡ್ ಕಮಿಷನರ್ ಆಗಿ ಹಾರಿಸ್ ಅತ್ಯುತ್ತಮ ಆಯ್ಕೆ. ಇದು ಜಾಗತಿಕ ಉದ್ಯಮ ರಂಗದಲ್ಲಿ ಭಾರತೀಯ ನಾಯಕತ್ವದ ಹೊಸ ನಿದರ್ಶನ ಎಂದು ಎಎಸಿಸಿಯ ಉಪಾಧ್ಯಕ್ಷ ತ್ರಿಭುವನ್ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp