ಚಿಕ್ಕಮಗಳೂರು: ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಮೂಡಿಗೆರೆ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸಲಾಗಿದೆ.
ಮೂಡಿಗೆರೆ ಪಟ್ಟಣದ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಿ ಬೆಂಬಲ ಸೂಚಿಸಿದ್ದು, ಶುಕ್ರವಾರದ ಸಂತೆ ಕೂಡಾ ರದ್ದುಗೊಳಿಸಲಾಗಿದೆ.
ಆಸ್ಪತ್ರೆ, ಬ್ಯಾಂಕ್ , ಇನ್ನಿತರ ಸರಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತಿದ್ದು,ಸರಕಾರಿ ಬಸ್ಸುಗಳು, ವಾಹನಗಳು ಚಾಲನೆಯಲ್ಲಿವೆ. ಬಂದ್ ಮಾಹಿತಿ ಸಿಗದ ಕಾರಣ ಖರೀದಿಗೆಂದು ಪಟ್ಟಣಕ್ಕೆ ಬಂದಿದ್ದ ಹಳ್ಳಿಗರು ನಿರಾಸೆಯಿಂದ ಮರಳುವಂತಾಗಿದೆ.
ಮೂಡಿಗೆರೆಯ ಎಂ.ಜಿ ರಸ್ತೆಯಲ್ಲಿ ಸಾವಿರಾರು ಸಂಘಪರಿವಾರದ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಅವಕಾಶ ಕೊಡದ ಪೊಲೀಸರು, ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು.
ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು ರಸ್ತೆಗೆ ನುಗ್ಗಿದರು.