ಭೋಪಾಲ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 45 ಪ್ರಾಯದ ಮುಸ್ಲಿಮ್ ಬೀದಿಬದಿ ಟೋಸ್ಟ್ ವ್ಯಾಪಾರಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ತನ್ನ ಆಧಾರ್ ಕಾರ್ಡ್ ತೋರಿಸಿ ಗುರುತನ್ನು ಸಾಬೀತುಪಡಿಸುವಂತೆ ಒತ್ತಾಯಿಸಿ ಇಬ್ಬರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಬಳೆ ಮಾರಾಟಗಾರನಾದ ತಸ್ಲೀಮ್ ಅಲಿ ಎಂಬಾತನ ಮೇಲೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಗಂಭೀರವಾಗಿ ಹಲ್ಲೆ ನಡೆಸಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಅಮಲ್ತಾಝ್ ಹಳ್ಳಿಯ ನಿವಾಸಿಯಾದ ಝಹೀರ್ ಖಾನ್ ಅವರು ಬುಧವಾರ ಮಧ್ಯಾಹ್ನ ದೇವಾಸ್ ನಗರದ ಬರೋಲಿ ರಸ್ತೆಯಲ್ಲಿ ಟೋಸ್ಟ್ ಗಳನ್ನು ಮಾರಾಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಆತನ ಬಳಿ ಆಗಮಿಸಿ ಆಧಾರ್ ಕಾರ್ಡ್ ತೋರಿಸುವಂತೆ ಬಲವಂತಪಡಿಸಿ ಆತನನ್ನು ನಿಂದಿಸಿ ದೊಣ್ಣೆ ಮತ್ತು ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಸೂರ್ಯಕಾಂತ್ ಶರ್ಮಾ ತಿಳಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಅವರು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಝಹೀರ್ ಖನ್ ಬುಧವಾರ ಸಂಜೆ ಹಟ್ಟಿಪಲಿಯ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 294, 323, 506 ಮತ್ತು 34 ರ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.