ಕೊಲೆಯತ್ನದ ಆರೋಪಿಗೆ ಹತ್ತು ಸಸಿ ನೆಟ್ಟು, ಆರೈಕೆ ಮಾಡುವಂತೆ ಸೂಚಿಸಿ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್ !

Prasthutha|

ಮಧ್ಯಪ್ರದೇಶ: ಕೊಲೆಯತ್ನದ ಆರೋಪಿಯೋರ್ವನಿಗೆ ಮಧ್ಯಪ್ರದೇಶದ ಹೈಕೋರ್ಟ್ ವಿಭಿನ್ನ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಹತ್ತು ಸಸಿಗಳನ್ನು ನೆಟ್ಟು ಅವುಗಳ ಆರೈಕೆ ಮಾಡುವಂತೆ ಸೂಚಿಸಿರುವ ಹೈಕೋರ್ಟ್‌ ಗ್ವಾಲಿಯರ್ ಪೀಠ, ಸೃಷ್ಟಿಕಾರ್ಯ ಮತ್ತು ನಿಸರ್ಗದೊಡನೆ ಸಾಮರಸ್ಯ ಸಾಧಿಸುವ ಮೂಲಕ ಹಿಂಸೆ ಮತ್ತು ದುಷ್ಟತನವನ್ನು ಹೋಗಲಾಡಿಸಲು ಪರೀಕ್ಷಾರ್ಥವಾಗಿ ಈ ಷರತ್ತು ವಿಧಿಸಲಾಗಿದೆ ಎಂದು ಹೇಳಿದೆ.

- Advertisement -

ನ್ಯಾ. ಆನಂದ್‌ ಪಾಠಕ್‌ ಅವರಿದ್ದ ಏಕಸದಸ್ಯ ಪೀಠವು, ಅರ್ಜಿದಾರರ ಕಾರ್ಯ ಸಸಿ ನೆಡುವುದಕ್ಕೆ ಮಾತ್ರ ಕೊನೆಗೊಳ್ಳದೆ,ಬದಲಿಗೆ ಅವುಗಳನ್ನು ಪೋಷಿಸಿ ಕಾಳಜಿ ಮಾಡುವವರೆಗೆ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಲೋಪ ಕಂಡುಬಂದರೆ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಎಚ್ಚರಿಕೆಯನ್ನು ನೀಡಿದೆ. ಅರ್ಜಿದಾರ ವಿಚಾರಣಾ ನ್ಯಾಯಾಲಯ ಕಟ್ಟಡದ ಎದುರು ನೆಟ್ಟ ಸಸಿಗಳ ಛಾಯಾಚಿತ್ರಗಳನ್ನು 30 ದಿನಗಳಲ್ಲಿ ಸಲ್ಲಿಸಬೇಕು ಎಂದೂ ಸೂಚಿಸಿದೆ.

ಕೇವಲ ಮರ ನೆಡುವ ಪ್ರಶ್ನೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಕಲ್ಪನೆಯೊಂದರ ಸಾಕಾರಕ್ಕೆ ಸಂಬಂಧಿಸಿದೆ ಎಂದು ಪೀಠವು ಹೇಳಿತು. ಅರ್ಜಿದಾರ ತಾನು ಎರಡೂವರೆ ವರ್ಷಗಳಿಗಿಂತಲೂ ಹೆಚ್ಚು ಕಾಲ ಜೈಲುವಾಸವನ್ನು ಪೂರ್ವಭಾವಿ ಬಂಧನವಾಗಿ ಅನುಭವಿಸಿದ್ದರಿಂದ ಜಾಮೀನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ, ಮಾತ್ರವಲ್ಲದೆ ರಾಷ್ಟ್ರೀಯ, ಪರಿಸರಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮುದಾಯ ಸೇವೆ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದ. ಇದೀಗ ಸಸಿ ನೆಡುವಂತೆ ಮತ್ತು ಎರಡು ಸಾಲ್ವೆಂಟ್‌ ಶ್ಯೂರಿಟಿಗಳೊಂದಿಗೆ ₹1,00,000 ವೈಯಕ್ತಿಕ ಬಾಂಡ್ ಒದಗಿಸುವಂತೆ ಸೂಚಿಸಿ ಹೈಕೋರ್ಟ್ ಜಾಮೀನು ನೀಡಿದೆ.

Join Whatsapp