ಗೌರಿ ಓದಿದ್ದು ಬೆಂಗಳೂರಿನಲ್ಲೇ ಆದರೂ ಪತ್ರಕರ್ತೆಯಾಗಿ ಹೆಚ್ಚು ಕಾಲ ಇದ್ದದ್ದು ದೆಹಲಿಯಲ್ಲಿ…

Prasthutha|

ಗೌರಿ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡುವಷ್ಟರಲ್ಲಿ ಕನ್ನಡಕ್ಕಿಂತ ಹೆಚ್ಚು ವಿಶಾಲವಾಗಿದ್ದ ಇಂಗ್ಲಿಷ್ ಪತ್ರಿಕೋದ್ಯಮದ ಜಗತ್ತಿನಲ್ಲಿ ಇದ್ದು ಬಂದಿದ್ದರು. ಓದಿದ್ದು ಬೆಂಗಳೂರಿನಲ್ಲೇ ಆದರೂ ಪತ್ರಕರ್ತೆಯಾಗಿ ಹೆಚ್ಚು ಕಾಲ ಇದ್ದದ್ದು ದೆಹಲಿಯಲ್ಲಿ. ತನ್ನ ಕ್ಲಾಸ್ ಮೇಟ್ ಚಿದಾನಂದ ರಾಜ ಘಟ್ಟರನ್ನು ಮದುವೆಯಾದ ನಂತರವೂ ಗೌರಿ ದೆಹಲಿ ವಾಸಿಯೇ.

- Advertisement -


ಕೆಲ ಕಾಲದ ನಂತರ ಅವರಿಬ್ಬರೂ ಪ್ರತ್ಯೇಕಗೊಳ್ಳಲು ನಿರ್ಧರಿಸಿದಾಗ ಗೌರಿ ಕಾಮನ್ ವೆಲ್ತ್ ಒಕ್ಕೂಟದ ಸ್ಕಾಲರ್ ಶಿಪ್ ಪಡೆದು ಪತ್ರಿಕೋದ್ಯಮದ ವಿಶೇಷ ಅಧ್ಯಯನಕ್ಕೆಂದು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರೀಸ್ ನಗರಕ್ಕೆ ಹೋದರು. ಅಲ್ಲಿ ಎರಡು ವರ್ಷವಿದ್ದು ನಂತರ ದೆಹಲಿಗೆ ವಾಪಸ್ ಬರುವಷ್ಟರಲ್ಲಿ ಮಾಜಿ ಪತಿ ಚಿದಾನಂದ ರಾಜಘಟ್ಟ `ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯ ಅಮೆರಿಕ ಎಡಿಷನ್ ನ ಟೀಂ ಸೇರಿಕೊಳ್ಳಲು ಹೊರಟಿದ್ದರು.
ಗೌರಿಯ ವ್ಯಕ್ತಿತ್ವ ಮತ್ತು ಮನೋಭೂಮಿಕೆ ಹೇಗಿತ್ತೆಂದು ತಿಳಿಯಲು ಇದೊಂದು ಮುಖ್ಯ ಸಂದರ್ಭವಾಗಿದೆ.
ಇದನ್ನು ಗೌರಿಯೇ ಪ್ರಾಸಂಗಿಕವಾಗಿ ಮಾತನಾಡುವಾಗ ನನಗೆ ಹೇಳಿದ್ದು ಮತ್ತು ಹೆಚ್ಚು ಜನರಿಗೆ ತಿಳಿದಿರದ ಸಂಗತಿ.
ಗೌರಿ ಪ್ಯಾರೀಸ್ನಿಂದ ಬರುವಷ್ಟರಲ್ಲಿ ಚಿದಾನಂದ್ ಅಮೆರಿಕೆಗೆ ಹೊರಡುವ ತಯಾರಿಯಲ್ಲಿದ್ದರಲ್ಲ. ಆಗ ಕುಟುಂಬದವರು ಹಾಗೂ ಹಿತೈಷಿಗಳ ಅಪೇಕ್ಷೆಯಂತೆ ಗೌರಿಯೂ ಅಮೆರಿಕೆಗೆ ಹೋದರು. ಚಿದಾನಂದ್ ಜೊತೆ ಮದುವೆ ಜೀವನವನ್ನು ಮುಂದುವರೆಸುವ ಸಾಧ್ಯತೆ ಇದೆಯೋ ಎಂದು ನೋಡಲು ಬಹುಶಃ ಗೌರಿ ಯೋಚಿಸಿದ್ದರು. ಆದರೆ ಅದಾಗಲಿಲ್ಲ. ಅವರಿಬ್ಬರು ಬೇರ್ಪಟ್ಟರು.
ಗೌರಿಗೆ ಅಮೆರಿಕೆಯಲ್ಲಿದ್ದಾಗ ಓರ್ವ ಸಾಧಾರಣ ಗೃಹಿಣಿಯಂತೆ ಮನೆಯಲ್ಲಿ ಕುಳಿತು ಕಾಲ ಕಳೆಯುವ ಜೀವನ ನೆನೆದು ಚಡಪಡಿಕೆಯಾಯಿತೇನೋ? ಪೂರ್ಣಚಂದ್ರ ತೇಜಸ್ವಿ ಯವರ ಚಿದಂಬರ ರಹಸ್ಯ’ ಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದಿಸಿದರು. ಆದರೆ ಅದನ್ನು ಪ್ರಕಟಿಸುವ ಪ್ರಯತ್ನ ಮಾಡಲಿಲ್ಲ. ಅನುವಾದ ಮಾಡಿದ ಹತ್ತು ವರ್ಷಗಳ ನಂತರ ಬೆಂಗಳೂರಿನ ಪತ್ರಿಕೆ ಆಫೀಸಿನಲ್ಲಿ ನನಗೊಮ್ಮೆ ಓದಲು ಕೊಟ್ಟರು.
`ಅನುವಾದ ಚೆನ್ನಾಗಿದೆ. ಯಾರಾದರು ಇಂಗ್ಲಿಷ್ ಪ್ರಕಾಶಕರನ್ನು ವಿಚಾರಿಸೋಣ’
ಅಂತ ನಾನಂದಾಗ ಗೌರಿ

`ಸ್ವಲ್ಪ ತಡಿ. ಅದನ್ನು ಇನ್ನೂ ಫೈನ್ ಟ್ಯೂನ್ ಮಾಡಬೇಕು’ ಅಂದಿದ್ದರು. ಗೌರಿಯ ಅನುವಾದವನ್ನು ಓದಿದ ತೇಜಸ್ವಿಯವರೂ ಸಹ ಚೆನ್ನಾಗಿ ಅನುವಾದ ಮಾಡಿದ್ದೀಯ ಕಣೆ. ಪಬ್ಲಿಷ್ ಮಾಡು’ ಎಂದಿದ್ದರಂತೆ. ಆದರೆ ಗೌರಿ ಯಾಕೋ ಮನಸು ಮಾಡಲಿಲ್ಲ. ಈಗದರ ಹಸ್ತಪ್ರತಿ ಎಲ್ಲಿದೆಯೋ ಗೊತ್ತಿಲ್ಲ.
ಇರಲಿ,
ಅಮೆರಿಕೆಯ ಜೀವನದ ಏಕತಾನತೆ, ಅಮೆರಿಕೆಯಲ್ಲಿನ ವಾಸವು ತನ್ನ ಸಾಮರ್ಥ್ಯ ಹಾಗೂ ವ್ಯಕ್ತಿತ್ವವನ್ನು, ಬಯಸುವ ಕ್ರಿಯಾಶೀಲತೆಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಕೊಡದು ಅಂತನ್ನಿಸಿರಬೇಕು.
ಗೌರಿ ವಾಪಸ್ ಇಂಡಿಯಾಗೆ ಬರಲು ನಿರ್ಧರಿಸಿಕೊಂಡರು.
ಅಲ್ಲಿಂದಾಚೆಗೆ ಗೌರಿ ಹಾಗೂ ಚಿದಾನಂದ ಅಧಿಕೃತವಾಗಿ ಡೈವೋರ್ಸ್ ಪಡೆದು ಅತ್ಯುತ್ತಮ ಗೆಳೆತನವನ್ನು ಮುಂದುವರೆಸಿಕೊಂಡು ಹೋದರು. ಚಿದಾನಂದ ಯಾವಾಗ ಬೆಂಗಳೂರಿಗೆ ಬಂದರೂ ಗೌರಿಯನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಈ ಮಾಜಿ ದಂಪತಿಗಳು ಭೇಟಿಯಾಗುವಾಗ ಅನೇಕ ಬಾರಿ ನಾನೂ ಇರುತ್ತಿದ್ದೆ. ಸ್ವಾರಸ್ಯಕರವಾದ, ಮುದ ನೀಡುವ ಕೆಲ ಪ್ರಸಂಗಗಳನ್ನು ಮುಂದೆ ಬರೆಯುತ್ತೇನೆ.
ಗೌರಿ ಅಮೆರಿಕಾ ಬಿಟ್ಟು ದೆಹಲಿಗೆ ಬಂದು ಈ ನಾಡು ಬಳಗ ಸೇರಿ ಕೊಂಡರು. ಇವೆಲ್ಲವೂ ನಡೆದದ್ದು 1985ರಿಂದ 1995ರ ನಡುವಿನ ಅವಧಿಯೊಳಗೆ.
ಗೌರಿಯ ಸ್ವತಂತ್ರ ಪ್ರವೃತ್ತಿ ಹಾಗೂ ಧೈರ್ಯ ಹೇಗಿತ್ತೆನ್ನಲು ಅವರ ಪ್ಯಾರೀಸ್ ಜೀವನದ ಸಂದರ್ಭವನ್ನು ನೋಡಬೇಕು.
ಗೌರಿಗೆ ಸಿಗುತ್ತಿದ್ದ ಸ್ಕಾಲರ್ ಶಿಪ್ ಹಾಗೂ ತಂದೆ ಲಂಕೇಶರು ಆಗೀಗ ಕಳುಹಿಸುತ್ತಿದ್ದ ಹಣದ ನೆರವು ಪ್ಯಾರೀಸ್ ನಗರ ವಾಸದ ಖರ್ಚುಗಳಿಗೆ ಎಟುಕದ ಕಾರಣ ಗೌರಿ ಕಡಿಮೆ ಬಾಡಿಗೆಯ ಚಿಕ್ಕ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದರು. ಗೌರಿ ನನಗೊಮ್ಮೆ ಹೇಳಿದ ಪ್ರಕಾರ, ಬಾಡಿಗೆಯ ಖರ್ಚು ಕಡಿಮೆ ಮಾಡಿಕೊಳ್ಳಲು ಗೌರಿ ಕೆಲಕಾಲ ಆಫ್ರಿಕನ್ ಕಾಲೇಜು ಹುಡುಗರ ಅಪಾರ್ಟ್ ಮೆಂಟ್ ಗಳನ್ನು ಬಾಡಿಗೆ ಹಂಚಿಕೆ ಆಧಾರದಲ್ಲಿ ಶೇರ್ ಮಾಡಿದ್ದೂ ಇದೆ. ಆ ದೊಡ್ಡ ಆಕಾರದ ಆಫ್ರಿಕಾದ ವಿದ್ಯಾರ್ಥಿಗಳ ಎದಿರು ಗೌರಿ ಗುಬ್ಬಚ್ಚಿ ತರ ಕಾಣುತ್ತಿದ್ದರಂತೆ. `ಆ ಹುಡುಗರು ನನ್ನನ್ನು ಬಹಳ ಕಾಳಜಿಯಿಂದ, ಚೆನ್ನಾಗಿ ನೋಡಿಕೊಂಡರು’ ಎಂದು ಗೌರಿ ಆವಾಗಾವಾಗ ನೆನಪಾದಾಗ ಹೇಳುತ್ತಿದ್ದರು.
ಗೌರಿ ಒಂಟಿಯಾಗಿರಲು ಹೆದರುತ್ತಿರಲಿಲ್ಲ. ಏಕಾಂಗಿ ಪ್ರವಾಸ, ಪ್ರಯಾಣಕ್ಕೆ ಹಿಂಜರಿಯುತ್ತಿರಲಿಲ್ಲ.

- Advertisement -

ಅದು ಬದುಕಿನ ಪ್ರಯಾಣವಾದರೂ ಸೈ…
ಅನ್ನುವ ಮನೋಭಾವ ಅವರದ್ದು.
ದೆಹಲಿಯಲ್ಲಿ ಪತ್ರಕರ್ತೆಯಾಗಿದ್ದಾಗಲೂ ಭಾರತ ಒಕ್ಕೂಟ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ನಡೆದಾಗ ವರದಿ ಮಾಡಲು ನೇರ ಅಲ್ಲಿಗೇ ಹೋಗಿದ್ದರು. ಗೌರಿಯ ಮಾಧ್ಯಮ ಸಂಸ್ಥೆಯಲ್ಲಿ ಯುದ್ಧದ ವರದಿಗೆ ಯಾರನ್ನು ಕಳಿಸುವುದೆಂದು ಚರ್ಚೆ ನಡೆಯುತ್ತಿದ್ದಾಗ ಬರೀ ಪುರುಷರ ಹೆಸರುಗಳನ್ನೇ ಪ್ರಸ್ತಾಪಿಸುತ್ತಿದ್ದರಂತೆ. ಅಲ್ಲೇ ಕುಳಿತು ಅದನ್ನು ನೋಡುತ್ತಿದ್ದ ಗೌರಿ ಸಿಟ್ಟಿಗೆದ್ದು, ಜಗಳವಾಡಿ ಕೊನೆಗೆ ಕಾರ್ಗಿಲ್, ಜಮ್ಮು-ಕಾಶ್ಮೀರವೆಲ್ಲಾ ಓಡಾಡಿ ವರದಿ ಮಾಡಿ ಬಂದರು. ಕನ್ನಡ ಪತ್ರಕರ್ತೆಯರಲ್ಲಿ ಕಾರ್ಗಿಲ್ ಯುದ್ಧ ಭೂಮಿ ತನಕ ಹೋಗಿ ವರದಿ ನೀಡಿದ ಮೊದಲ ಪತ್ರಕರ್ತೆ ಗೌರಿ ಅನಿಸುತ್ತದೆ. ಆದರೆ ಅದೊಂದು ಹೆಗ್ಗಳಿಕೆ ಎಂಬಂತೆ ಗೌರಿ ಬಿಂಬಿಸಿಕೊಳ್ಳಲಿಲ್ಲ. ತಮ್ಮ ಕಾರ್ಗಿಲ್ ವಾರ್ ನ ಓಡಾಟವನ್ನು ನೆನಪಿಸಿಕೊಂಡು ಮಾತನಾಡುವಾಗ

`ಆ ಮಿಲಿಟರಿ ಆಫೀಸರ್ ಗಳು, ಕಾಶ್ಮೀರಿ ಹುಡುಗರು ಎಷ್ಟು ಹ್ಯಾಂಡ್ ಸಮ್ ಆಗಿರ್ತಾರೆ ಗೊತ್ತಾ…’ ಎನ್ನುತ್ತಿದ್ದರು.
ಕಾಶ್ಮೀರದ ಸಂಗತಿಗಳನ್ನು ರಾಜಕೀಯವಾಗಷ್ಟೇ ಚರ್ಚಿಸುವ ಅಭ್ಯಾಸವಿದ್ದ ನಮಗೆ ಸೈನಿಕರು ಹಾಗೂ ಮಿಲಿಟೆಂಟ್ ಗಳು ಸ್ಮಾರ್ಟಾಗಿರುವ ವಿಚಾರ ಏನೆಂದು ಮಾತನಾಡಲು ಸಾಧ್ಯವಿತ್ತು ?
ಓರ್ವ ಪತ್ರಕರ್ತೆಯಾಗಿ ಸಾಹಸ ಪ್ರವೃತ್ತಿ, ಬದುಕಿನ ಸೌಂದರ್ಯ ಹಾಗೂ ವೃತ್ತಿಯ ಅರಿವು, ಉಲ್ಲಾಸದ ಮನೋಭಾವ ಇವೆಲ್ಲಾ ಗೌರಿಯ ಸ್ವಭಾವಗಳಾಗಿದ್ದವು. ನಾಚಿಕೆ, ಕೀಳರಿಮೆ, ಸಂಕೋಚದ ನಡವಳಿಕೆಗಳನ್ನು ನಾನೆಂದೂ ನೋಡಿದ ನೆನಪಿಲ್ಲ. ನಮ್ಮ ಪತ್ರಕರ್ತರ ಪುಟ್ಟ ತಂಡದಲ್ಲಿ ಗೌರಿ ಆರಾಮಾಗಿರುತ್ತಿದ್ದರು. ಸಿಗರೇಟು ಸೇದುತ್ತಿದ್ದರು. ಬಿಡುವಿದ್ದಾಗ, ಹಗಲಿನಲ್ಲಾದರೆ ಬಿಯರ್ ಕುಡಿಯುತ್ತಿದ್ದರು. ಸಂಜೆಯ ಗೋಷ್ಠಿಯಾದರೆ ಖೋಡೇಸ್ ತ್ರಿಬಲ್ ಎಕ್ಸ್ ರಮ್ ಕುಡಿಯುತ್ತಿದ್ದರು. ಗುಂಪಿನಲ್ಲಿದ್ದಾಗ ರಾಜಕೀಯ, ಸಾಹಿತ್ಯ, ಸಿನಿಮಾ, ಸೆಕ್ಸು, ಗಾಸಿಪ್ಪು, ಹೋರಾಟಗಳೂ, ಜರ್ನಲಿಸಂ ಎಲ್ಲದರ ಬಗ್ಗೆ ಸಹಜವಾಗಿ ಮಾತನಾಡುತ್ತಿದ್ದರು. ಗೌರಿ ಇದ್ದೆಡೆ ಅವರೊಬ್ಬ ಮಹಿಳೆ ಎನ್ನುವ ಟ್ಯಾಗ್ ಬೇರೆಯವರು ಜೋಡಿಸಬೇಕಿತ್ತೇ ವಿನಃ ಗೌರಿ ತಾವಾಗಿ ಎಂದೂ ಮಹಿಳಾ ಕೋಟಾದಡಿ ಗುರುತಿಸಿಕೊಳ್ಳಲು ಬಯಸುತ್ತಿರಲಿಲ್ಲ.
ನಾನೊಮ್ಮೆ ಸುಮ್ಮನಿರದೆ ಕರ್ನಾಟಕದ ಪತ್ರಕರ್ತೆಯರು ಸೇರಿ ಯಾಕೆ ಒಂದು ಸಂಘ ಮಾಡಿಕೊಳ್ಳಬಾರದು’ ಅಂತ ಸಲಹೆ ಕೊಟ್ಟೆ.
ಅದಕ್ಕೆ ಗೌರಿ ಕೊಟ್ಟ ಉತ್ತರವನ್ನು ನಾನು ಊಹಿಸಿರಲಿಲ್ಲ.
(ಮುಂದುವರಿಯುವುದು)

Join Whatsapp