‘ಇಸ್ಲಾಮಾಫೋಬಿಯಾ’ ಕುರಿತ ಕುತೂಹಲ | ರಾಜಸ್ಥಾನ ಯುವಕನಿಂದ ಕಾಶ್ಮೀರದಲ್ಲಿ ಇಸ್ಲಾಮಿಕ್ ಅಧ್ಯಯನಕ್ಕೆ ಅರ್ಜಿ

Prasthutha|

ಶ್ರೀನಗರ : ರಾಜಸ್ಥಾನದ ಅಲ್ವಾರ್ ಮೂಲದ 21 ವರ್ಷದ ಶುಭಂ ಯಾದವ್ ಗೆ ಇದೊಂದು ಸಹಜ ಸಾಧನೆ. ಆದರೆ, ಅವರು ಮಾಡಿರುವ ಸಾಧನೆ ಈಗ ಇಡೀ ದೇಶದಲ್ಲಿ ಸುದ್ದಿಯಾಗಿದೆ. ಜಗತ್ತನ್ನೇ ವಿಭಜಿಸಿರುವ ‘ಇಸ್ಲಾಮಾಫೋಬಿಯಾ’ದ ಬಗ್ಗೆ ಕುತೂಹಲ ಹೊಂದಿರುವ ಶುಭಂ, ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯದ ಇಸ್ಲಾಮಿಕ್ ಅಧ್ಯಯನ ಕೇಂದ್ರದ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾದ 93 ಮಂದಿಯಲ್ಲಿ ಒಬ್ಬರಾಗಿದ್ದಾರೆ.

ಶುಭಂ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ವಿಶೇಷ ಏನೆಂದರೆ, ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಪ್ರಥಮ ಮುಸ್ಲಿಮೇತರ ಮತ್ತು ಪ್ರಥಮ ಕಾಶ್ಮೀರೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

- Advertisement -

ಶುಭಂ ಯಾದವ್ ಗೆ ಇದೇನೂ ದೊಡ್ಡ ಸಾಧನೆ ಎನಿಸಿಲ್ಲ. ಅವರ ಪ್ರಕಾರ, “ನನಗೆ ಪತ್ರಕರ್ತರು ಸೇರಿದಂತೆ ಹಲವರ ತುಂಬಾ ಕರೆಗಳು ಬಂದಿವೆ. ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದು ದೊಡ್ಡ ಸಾಧನೆ ಎಂಬುದು ಅವರ ಭಾವನೆ. ಆದರೆ, ಇದು ದೊಡ್ಡ ವಿಷಯವೇನಲ್ಲ. ಕಾನೂನು, ಸಂಸ್ಕೃತಿ, ಗುಣಗಳ ಕುರಿತ ಇತರ ಎಲ್ಲಾ ವಿಷಯಗಳಂತೆ, ಇದೂ ಒಂದು ವಿಷಯ’’ ಎಂದು ಹೇಳಿದ್ದಾರೆ.

“ಇಸ್ಲಾಮಾಫೋಬಿಯಾ ಮತ್ತು ವಿಭಜನೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರ ಧರ್ಮಗಳನ್ನು ಅರಿತುಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿತು. ಇಸ್ಲಾಮಿಕ್ ಅಧ್ಯಯನ ಕೇವಲ ಮುಸ್ಲಿಮರ ಕುರಿತಾದ ಅಧ್ಯಯನವಲ್ಲ, ಅದು ಇಸ್ಲಾಮಿಕ್ ಕಾನೂನು ಮತ್ತು ಸಂಸ್ಕೃತಿಯ ಸಂಶೋಧನೆ ಕುರಿತಾದುದು’’ ಎಂದು ಶುಭಂ ಹೇಳಿದ್ದಾರೆ. ಕಾನೂನು ಅಧ್ಯಯನಕ್ಕೂ ಆಸಕ್ತಿ ಹೊಂದಿರುವ ಶುಭಂ, ಪ್ರಥಮ ಆದ್ಯತೆ ಯಾವುದಕ್ಕೆ ನೀಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತತ್ವಜ್ಞಾನ ವಿಷಯದಲ್ಲಿ ಪದವಿ ಪಡೆದಿರುವ ಶುಭಂ ಇನ್ನೂ ಹಲವು ಪ್ರತಿಷ್ಠಿತ ಪ್ರವೇಶ ಪರೀಕ್ಷೆಗಳನ್ನು ಬರೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿಯುವುದಕ್ಕೂ ಶುಭಂಗೆ ಆಸಕ್ತಿಯಿದೆ. ಅಂತಿಮವಾಗಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಅವರ ಮಹದಾಸೆ.     

- Advertisement -