ಬ್ರಿಜ್ ಭೂಷಣ್ ಬೆಂಬಲಿಗರಿಂದ ತಾಯಿಗೆ ಬೆದರಿಕೆ: ಸಾಕ್ಷಿ ಮಲಿಕ್

Prasthutha|

ನವದೆಹಲಿ: ಬಿಜೆಪಿ, ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಬೆಂಬಲಿಗರಿಂದ ತನ್ನ ತಾಯಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ ಸಾಕ್ಷಿ ಮಲಿಕ್ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆರೇಶನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಬೇಸರಗೊಂಡು ಕುಸ್ತಿಗೆ ವಿದಾಯ ಹೇಳಿದ್ದ ಸಾಕ್ಷಿ ಮಲಿಕ್, ಬ್ರಿಜ್ ಭೂಷಣ್ ಸಿಂಗ್ ಅವರ ಗೂಂಡಾಗಳು ಸಕ್ರಿಯರಾಗಿದ್ದಾರೆ ಎಂದಿದ್ದಾರೆ. ನನ್ನ ತಾಯಿಗೆ ಫೋನ್ ಮುಖಾಂತರ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ರಕ್ಷಣೆ ಸರ್ಕಾರದ ಹೊಣೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಕ್ಷಿ, ಬ್ರಿಜ್ ಭೂಷಣ್ ಪ್ರಭಾವಿ ಎಂದು ನಮಗೆ ಗೊತ್ತಿತ್ತು. ಆದರೆ, ಅವರು ಯಾರೊಂದಿಗೂ ಚರ್ಚಿಸದೆ ತಮ್ಮ ಊರಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಘೋಷಣೆ ಮಾಡುವಷ್ಟು ಶಕ್ತಿಶಾಲಿ ಎಂದು ತಿಳಿದಿರಲಿಲ್ಲ. ಈಗ ನಾವು ಕಿರಿಯ ಕುಸ್ತಿಪಟುಗಳ ಭವಿಷ್ಯ ಹಾಳು ಮಾಡಿದ ಆರೋಪ ಎದುರಿಸುತ್ತಿದ್ದೇವೆ. ನಾನು ಕುಸ್ತಿಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ನನ್ನಿಂದ ಸಾಧ್ಯವಾಗದಿದ್ದನ್ನು ನನ್ನ ಜೂನಿಯರ್ ಹುಡುಗಿಯರು ಮಾಡಬೇಕೆಂದು ನಾನು ಬಯಸುತ್ತೇನೆ. ಅವರು ದೇಶಕ್ಕಾಗಿ ಬೆಳ್ಳಿ, ಚಿನ್ನ ಗೆಲ್ಲಬೇಕೆಂದು ಆಶಿಸುತ್ತೇನೆ. ಯಾವುದೇ ಜೂನಿಯರ್ ನಮಗಾಗಿ ನೋವು ಅನುಭವಿಸುವುದು ಬೇಡ ಎಂದಿದ್ದಾರೆ.

- Advertisement -

ಕುಸ್ತಿ ಫೆಡರೇಶನ್‌ನ ಹೊಸ ಆಡಳಿತ ಸಮಿತಿ ಅಥವಾ ತಾತ್ಕಾಲಿಕ ನಿರ್ವಹಣಾ ಸಮಿತಿ ಜೊತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಜೊತೆ ಮಾತ್ರ ನಮ್ಮ ವಿರೋಧ ಇತ್ತು ಎಂದು ಸಾಕ್ಷಿ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷದಿಂದ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದೇನೆ. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬ ಕಲ್ಪನೆ ಕೂಡ ನನಗಿರಲಿಲ್ಲ. ಅವರು ಆಯ್ಕೆಗೊಂಡಾಗ ಬೇಸರಗೊಂಡು ಕುಸ್ತಿಗೆ ವಿದಾಯ ಹೇಳಿದ್ದೇನೆ. ಮುಂದೆ ಏನು ಮಾಡಬೇಕು ಎಂದು ನನಗೆ ಗೊತ್ತಿಲ್ಲ ಎಂದು ಸಾಕ್ಷಿ ಮಲಿಕ್ ನೊಂದು ಹೇಳಿದ್ದಾರೆ.

Join Whatsapp