ಪೊಲೀಸ್‌ ಠಾಣೆಯಲ್ಲಿ 25 ವರ್ಷಗಳ ಬಳಿಕ ತಾಯಿ-ಮಗನ ಭೇಟಿ !

Prasthutha|

- Advertisement -

ಕೇರಳ: ಒಂದೂವರೆ ವರ್ಷದವನಿದ್ದಾಗ ತಾಯಿಯಿಂದ ಬೇರ್ಪಟ್ಟಿದ್ದ ಮಗ, ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ತಾಯಿಯನ್ನು ಭೇಟಿಯಾದ ಅಪರೂಪದ ಘಟನೆ ಕೇರಳದ ಕೊಟ್ಟಾಯಂನ ಕರುಕಾಚಲ್‌ನಲ್ಲಿ ನಡೆದಿದೆ.

 30 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಕೇರಳದಿಂದ ಗುಜರಾತ್‌ ತೆರಳಿದ್ದ ಗೀತಾ ಎಂಬಾಕೆ, ಅಲ್ಲಿ ರಾಮ್ ಭಾಯಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮೊದಲ ಮಗು ಜನಿಸಿದ ಬಳಿಕ ದಂಪತಿ ಕೇರಳ್ಕಕೆ ಮರಳಿದ್ದರು. ಆದರೆ, ಗೀತಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದ ವೇಳೆ ಗೀತಾ-ರಾಮ್‌ ಭಾಯಿ ನಡುವೆ ಕೆಲ ವಿಚಾರಕ್ಕೆ ಮನಸ್ತಾಪ ಉಂಟಾಗಿ, ಒಂದೂವರೆ ವರ್ಷದ ಮಗು  ಗೋವಿಂದ್‌ನನ್ನು ಕರೆದುಕೊಂಡು ರಾಮ್‌ ಭಾಯಿ, ಗುಜರಾತ್‌ಗೆ ತೆರಳಿದ್ದರು. ಕೆಲ ದಿನಗಳ ಬಳಿಕ ಗೀತಾಗೆ ಪತ್ರ ಬರೆದಿದ್ದ ಪತಿ, ಗುಜರಾತ್‌ಗೆ ಮರಳದಂತೆ ತಾಕೀತು ಮಾಡಿದ್ದ.

- Advertisement -

ಈ ಹಿನ್ನಲೆಯಲ್ಲಿ ಕೇರಳದಲ್ಲೇ ಉಳಿದಿದ್ದ ಗೀತಾ, ಜೀವನೋಪಾಯಕ್ಕಾಗಿ ಆಟೋ ಚಾಲಕಿಯಾಗಿ  ದುಡಿಯಲು ಪ್ರಾರಂಭಿಸಿದ್ದರು. ಈ ನಡುವೆ ಪತಿ-ಪುತ್ರನನ್ನು ಕಾಣಲು ಗೀತಾ ಪ್ರತಿನಿತ್ಯವೂ ಪ್ರಾರ್ಥಿಸುತ್ತಿದ್ದರು. ಇದೇ ವೇಳೆ ಕೇರಳದಲ್ಲಿರುವ ತಾಯಿಯನ್ನು ಹುಡುಕಿ ಭೆಟಿಯಾಗುವಂತೆ ಗೋವಿಂದನ ತಂದೆಯ ಚಿಕ್ಕಮ್ಮ ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ, ಗೋವಿಂದ ಕೇರಳದ ಕೊಟ್ಟಾಯಂನ ಕರುಕಾಚಲ್‌ಗೆ ಬಂದಿಳಿದಿದ್ದಾನೆ. ಆ  ಬಳಿಕ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ತನ್ನ ತಾಯಿಯನ್ನು ಭೆಟಿಯಾಗಲು ಸಹಾಯ ಕೋರಿದ್ದಾನೆ.

ವಿಷಯ ತಿಳಿದ ಸ್ಥಳೀಯ ಜನಪ್ರತಿನಿಧಿ, ಗೀತಾರನ್ನು ಠಾಣೆಗೆ ಕರೆಸಿ ಮಗನನ್ನು ಭೇಟಿಯಾಗುವಂತೆ ಮಾಡಿದ್ದಾರೆ. ಮಗನನ್ನು ಭೇಟಿಯಾಗುತ್ತಲೇ ಗೀತಾ,  ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ತಾಯಿ-ಮಗನ 25 ವರ್ಷಗಳ ಬಳಿಕದ ಭೇಟಿಯ ಭಾವುಕ ಕ್ಷಣಕ್ಕೆ ಪೊಲೀಸರು ಸಾಕ್ಷಿಯಾದರು. ಮುಂದಿನ ದಿನಗಳಲ್ಲಿ ತಾಯಿಯ ಜೊತೆ ಇರುವುದಾಗಿ ಗೋವಿಂದ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.



Join Whatsapp