ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಅಂಗಾಂಗ ಮಾರಾಟಕ್ಕೆ ಮುಂದಾದ ತಾಯಿ!

Prasthutha|

ಕೊಚ್ಚಿ: ಕೇರಳದ ಮಹಿಳೆಯೋರ್ವರು ತಮ್ಮ ಹದಿಹರೆಯದ ಮಕ್ಕಳ ಚಿಕಿತ್ಸೆಯ ವೆಚ್ಚಗಳನ್ನು ಪೂರೈಸಲು ತಮ್ಮ ಎಲ್ಲಾ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

 ‘‘ತನ್ನ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಸಾಲವನ್ನು ತೀರಿಸಲು ತಾಯಿಯ ದೇಹದ ಅಂಗಾಂಗ(ಹೃದಯ ಸೇರಿದಂತೆ)ಗಳು ಮಾರಾಟಕ್ಕೆ’’ ಎಂಬ ಬೋರ್ಡ್‌ ಅನ್ನು ಹಿಡಿದು ಅಸಹಾಯಕ ಮಹಿಳೆ ತಮ್ಮ ಐದು ಮಕ್ಕಳೊಂದಿಗೆ ಬೀದಿಯಲ್ಲಿ ನಿಂತಿದ್ದಾರೆ.

- Advertisement -

ಆಕೆಯ ಇಬ್ಬರು ಹಿರಿಯ ಪುತ್ರರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಮಗಳು ನರಗಳ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ದೃಷ್ಟಿಗೆ ಪರಿಣಾಮ ಬೀಳುತ್ತಿದೆ. ಪತಿಯಿಂದ ದೂರವಾಗಿರುವ ಮಹಿಳೆ ಕೊಚ್ಚಿನ್ ನಗರದ ಹೊರವಲಯದಲ್ಲಿರುವ ವರಪ್ಪುಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಬಾಡಿಗೆ ಹೆಚ್ಚುತ್ತಿರುವ ಕಾರಣ, ಅವರು ಮನೆಯನ್ನು ಖಾಲಿ ಮಾಡಿ ನಗರದ ಕಂಟೇನರ್ ರಸ್ತೆಯ ಬದಿಯಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದಾರೆ.

ತಾನು ಹಲವು ವ್ಯಕ್ತಿಗಳಿಂದ ಲಕ್ಷಗಟ್ಟಲೆ ಸಾಲವನ್ನು ಪಡೆದಿದ್ದೇನೆ ಎಂದು ಸಂತಿ ಹೇಳಿದ್ದಾರೆ. ಮೂವರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಕೆಗೆ ಯಾವುದೇ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ‘‘ನನಗೆ ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ನಾನು ಅಸಹಾಯಕತೆಯಿಂದಾಗಿ ಇದನ್ನು ಮಾಡುತ್ತಿದ್ದೇನೆಯೇ ಹೊರತು, ಇದು ಯಾರದೇ ವಿರುದ್ಧದ ಪ್ರತಿಭಟನೆಯಲ್ಲ’’ ಎಂದು ಅವರು ಹೇಳಿದ್ದಾರೆ.

ಈ ವಿಷಯವು ಸರಕಾರದ ಗಮನಕ್ಕೆ ಬರುತ್ತಿದ್ದಂತೆ, ಮಕ್ಕಳ ಚಿಕಿತ್ಸೆಯನ್ನು ಭರಿಸುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು ಕುಟುಂಬದ ವೆಚ್ಚವನ್ನು ಪೂರೈಸಲು ಮುಂದಾಗಿದ್ದು, ಕುಟುಂಬವು ತಮ್ಮ ಬಾಡಿಗೆ ಮನೆಗೆ ಮರಳಿದೆ. ಉತ್ತರ ಕೇರಳ ಮೂಲದ ಕುಟುಂಬವು ಬಾಲಕಿಯ ನರ ಚಿಕಿತ್ಸೆಗಾಗಿ ಹಲವು ವರ್ಷಗಳ ಹಿಂದೆ ಕೊಚ್ಚಿಗೆ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಇಬ್ಬರು ಹಿರಿಯ ಪುತ್ರರು ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

- Advertisement -