ಬೈಕ್ ಗೆ ಲಾರಿ ಡಿಕ್ಕಿ ಅವಳಿ ಮಕ್ಕಳ ಜೊತೆ ತಾಯಿ ಸಾವು; ತಂದೆ ಗಂಭೀರ

Prasthutha|

ಹಾಸನ: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವಳಿ ಮಕ್ಕಳು ಹಾಗೂ ತಾಯಿ ಮೃತಪಟ್ಟು ತಂದೆ ಗಂಭೀರವಾಗಿ ಗಾಯಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಅವಳಿ ಮಕ್ಕಳಾದ ಪ್ರಣತಿ (3) ಹಾಗೂ ಪ್ರಣವ್ (3) ಸ್ಥಳದಲ್ಲೇ ಸಾವನ್ನಪ್ಪಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಾಯಿ ಜ್ಯೋತಿ ಮೃತಪಟ್ಟಿದ್ದಾರೆ.

- Advertisement -

ತಂದೆ ಶಿವಾನಂದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ದಂಪತಿಯು ಇಬ್ಬರು ಅವಳಿ ಮಕ್ಕಳ ಜೊತೆ ಬೈಕ್ ನಲ್ಲಿ ಹಾಸನದ ಕಡೆಗೆ ಹೊರಟಿದ್ದ ವೇಳೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದಾರೆ. ಡಿಕ್ಕಿ ರಭಸಕ್ಕೆ ಮಕ್ಕಳ ಮೃತದೇಹಗಳು ಛಿದ್ರವಾಗಿದ್ದು, ಪ್ರಣತಿ ದೇಹ ಗುರುತೂ ಕೂಡ ಸಿಗದಂತಾಗಿದೆ.

ಮಕ್ಕಳಿಬ್ಬರೂ ಸುಮಾರು ಎರಡು ಕಿಲೋಮೀಟರ್ವರೆಗೆ ಲಾರಿ ಚಕ್ರಕ್ಕೆ ಸಿಲುಕಿಕೊಂಡಿದ್ದವು. ಗಂಭೀರವಾಗಿ ಗಾಯಗೊಂಡ ಜ್ಯೋತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಪಘಾತವೆಸಗಿದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಶಿವಾನಂದ್  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

- Advertisement -

ಸ್ಥಳಕ್ಕೆ ಹಾಸನ ಸಂಚಾರ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಲಾರಿ ಚಾಲಕ ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಲಾರಿ ವಶಪಡಿಸಿಕೊಂಡ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Join Whatsapp