ಕೇರಳ | ದಲಿತರ ಕಾಲನಿ, ದೇವಸ್ಥಾನಕ್ಕೆ ದಾರಿಗಾಗಿ ಜಮೀನು ದಾನ ಮಾಡಿದ ಮಸೀದಿ

Prasthutha|

ಮಲಪ್ಪುರಂ : ಇಲ್ಲಿನ ಮುದುವಲ್ಲೂರ್ ಪಂಚಾಯತ್ ವ್ಯಾಪ್ತಿಯಲ್ಲಿ ಬೆಟ್ಟವೊಂದರ ಮೇಲೆ ಕೆಲವು ದಲಿತ ಕುಟುಂಬಗಳು ವಾಸಿಸುತ್ತಿವೆ. ಅವರಿಗೆ ತಮ್ಮ ಮನೆಗಳಿರುವ ಕಾಲನಿ ಹಾಗೂ ಅಲ್ಲೇ ಕೊಂಚ ಮುಂದೆ ಇರುವ ತಮ್ಮ ದೇವಸ್ಥಾನಕ್ಕೆ ಹೋಗಲು ಸರಿಯಾದ ದಾರಿಯಿರಲಿಲ್ಲ. ಹಲವು ವರ್ಷಗಳಿಂದ ತಮ್ಮ ವಠಾರ ಹಾಗೂ ಅಲ್ಲೇ ಸ್ವಲ್ಪ ದೂರದಲ್ಲಿರುವ ಕೋಝಿಕೋಡನ್ ಮುಚಿಂತದಂ ಭಗವತಿ ದೇವಸ್ಥಾನಕ್ಕೆ ಹೋಗಲು ದಾರಿಯೊಂದು ಬೇಕೆಂಬುದು ಅಲ್ಲಿನ ನಿವಾಸಿಗಳ ಹಲವು ವರ್ಷಗಳ ಕನಸಾಗಿತ್ತು.

ಆದರೆ, ಆ ಕಾಲನಿ ಮತ್ತು ದೇವಸ್ಥಾನದ ಸುತ್ತದ ಜಮೀನುಗಳಲ್ಲಿ ಒಂದು ಜಮೀನು ಮಸೀದಿಗೆ ಸೇರಿದ್ದುದೂ ಆಗಿತ್ತು. ಹೀಗಾಗಿ, ತಮಗೆ ಸುಗಮವಾಗಿ ಹಾದು ಹೋಗಲು ದಾರಿ ಕೊಡುವಂತೆ, ಸ್ಥಳೀಯ ಮಸೀದಿ ಆಡಳಿತವನ್ನು ಕೇಳಲು ದಲಿತರು ನಿರ್ಧರಿಸಿದರು. ಹೀಗಾಗಿ ಅವರು ದೇವಸ್ಥಾನದ ಆಡಳಿತ ಸಮಿತಿಯನ್ನು ಸಂಪರ್ಕಿಸಿ ತಮ್ಮ ಮನವಿಯನ್ನು ಅರ್ಪಿಸಿದರು.

- Advertisement -

ಸಮಿತಿಯು ದಲಿತರ ಮನವಿಗೆ ಹೃತ್ಪೂರ್ವಕವಾಗಿ ಒಪ್ಪಿ, ತಮ್ಮ ಜಮೀನಿನಲ್ಲೇ ಒಂದು ಭಾಗದಲ್ಲಿ ದಾರಿ ಬಿಡಲು ನಿರ್ಧರಿಸಿತು. ಅದೂ ಉಚಿತವಾಗಿಯೇ ಜಮೀನನ್ನು ನೀಡಲು ನಿರ್ಧರಿಸಿತು. ಸ್ಥಳೀಯ ವಾರ್ಡ್ ಪಂಚಾಯತ್ ಸದಸ್ಯ ಅಹಮದ್ ಸಘೀರ್ ನೆರವಿನಿಂದ, ಪಂಚಾಯತ್ ವತಿಯಿಂದ ಮಸೀದಿ ದಾನ ಮಾಡಿದ ದಾರಿಗೆ ಮೆಟ್ಟಿಲುಗಳನ್ನು ಕಟ್ಟಿಸಿಕೊಡಲಾಗಿದೆ.

ದೇವಸ್ಥಾನ 45 ವರ್ಷಕ್ಕೂ ಹೆಚ್ಚು ಹಳೆಯದು, ಆದರೆ ಬೆಟ್ಟದಲ್ಲಿದ್ದ ಕಾರಣ ಮುಖ್ಯ ರಸ್ತೆಯಿಂದ ಅಲ್ಲಿಗೆ ತೆರಳುವುದು ಕಷ್ಟದಾಯಕವಾಗಿತ್ತು. ಈಗ ಮಸೀದಿಯು ದಾರಿಗೆ ಜಮೀನು ದಾನ ಮಾಡಿರುವುದರಿಂದ, ಸ್ಥಳೀಯ ನಿವಾಸಿಗಳಿಗೆ ದೇವಸ್ಥಾನಕ್ಕೆ ಹೋಗಿಬರುವುದು ಸುಗಮವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.     

- Advertisement -