ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿದ್ದೀಕ್ ಕಾಪ್ಪನ್ ವಿರುದ್ಧ ದೋಷಾರೋಪ ದಾಖಲು

Prasthutha|

ಲಕ್ನೋ: ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಕ್ನೋ ನ್ಯಾಯಾಲಯ ದೋಷಾರೋಪ ದಾಖಲಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿದೆ.

ಕಾಪ್ಪನ್ ಸೇರಿದಂತೆ 7 ಮಂದಿ ಆರೋಪಿಗಳ ವಿರುದ್ಧ ಪಿಎಂಎಲ್’ಎ ಪ್ರಕರಣದಡಿ ಡಿಸೆಂಬರ್ 6ರಂದು ದೋಷಾರೋಪ ದಾಖಲಿಸಲಾಗಿದೆ ಎಂದು ಇ.ಡಿ.ಪರ ವಕೀಲ ಕುಲದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ.

- Advertisement -

2022, ಅಕ್ಟೋಬರ್’ನಲ್ಲಿ ಲಕ್ನೋ ಸೆಷನ್ಸ್ ಕೋರ್ಟ್ ಸಿದ್ದೀಕ್ ಕಾಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 2021, ಫೆಬ್ರವರಿಯಲ್ಲಿ ಸಿದ್ದೀಕ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಕೆ.ಎ.ರವೂಫ್ ಶರೀಫ್, ಅತೀಕುರ್ರಹ್ಮಾನ್, ಮಸೂದ್ ಅಹ್ಮದ್, ಮುಹಮ್ಮದ್ ಆಲಂ, ಅಬ್ದುಲ್ ರಝಾಕ್ ಮತ್ತು ಅಶ್ರಫ್ ಖಾದಿರ್ ಅವರು ಈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.

ಹತ್ರಾಸ್ ಸಂಚು ಪ್ರಕರಣದಲ್ಲಿ 2020, ಆಕ್ಟೋಬರ್ 6ರಿಂದ ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿರುವ  ಸಿದ್ದೀಕ್ ಅವರಿಗೆ ಸೆಪ್ಟಂಬರ್ 9ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೂ, ಪಿಎಂಎಲ್’ಎ ಪ್ರಕರಣದಲ್ಲಿ ಸಿದ್ದೀಕ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ ಅವರು ಸದ್ಯ ಉತ್ತರಪ್ರದೇಶ ಜೈಲಿನಲ್ಲಿಯೇ ಇದ್ದಾರೆ.

- Advertisement -