►”ಪೂಜಾರಗೂ ಉಪಟಳ ನೀಡಿದ್ದೆ” ಎಂದ ಪಾಕ್ ಆಟಗಾರ
ಲಾಹೋರ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಮೊದಲ ಬಾರಿ ಭೇಟಿಯಾದಾಗಲೇ ತುಂಬಾ ಆತ್ಮೀಯತೆ ಅವರಲ್ಲಿತ್ತು. ವಿರಾಟ್ ಕೊಹ್ಲಿ ಅವರನ್ನು ‘ನಮ್ಮ ವಿರಾಟ್ ಕೊಹ್ಲಿ’ ಅನ್ನೋದರಲ್ಲಿ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಕ್ರಿಕೆಟಿಗರು ನಾವೆಲ್ಲರೂ ಒಂದು ಕುಟುಂಬವಿದ್ದಂತೆ ಎಂದು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮೆನ್ ಮೊಹಮ್ಮದ್ ರಿಝ್ವಾನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
2021ರ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಹತ್ತು ವಿಕೆಟ್ ಗಳ ಸೋಲು ಅನುಭವಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ಬ್ಯಾಟ್ಸ್ ಮೆನ್ ಗಳಾದ ಬಾಬರ್ ಅಝಂ ಹಾಗೂ ಮೊಹಮ್ಮದ್ ರಿಝ್ವಾನ್ ಅವರನ್ನ ಆಲಿಂಗಿಸಿ, ಅಭಿನಂದಿಸುವ ಮೂಲಕ ಕ್ರಿಕೆಟ್ ಜಗತ್ತಿನ ಮೆಚ್ಚುಗೆ ಪಡೆದಿದ್ದರು.
ಈ ಕುರಿತಾಗಿ ‘ಕ್ರಿಕೆಟ್ ಬಾಝ್ ವಿತ್ ವಹೀದ್ ಖಾನ್’ ಅನ್ನೋ ಯೂಟ್ಯೂಬ್ ಸಂದರ್ಶನದಲ್ಲಿ ರಿಝ್ವಾನ್ ಮುಕ್ತವಾಗಿ ಮಾತನಾಡಿದ್ದಾರೆ.
“ಕೊಹ್ಲಿ ಮೈದಾನದಲ್ಲಿ ಹೆಚ್ಚು ಆಕ್ರಮಣಶೀಲರಾಗಿರುತ್ತಾರೆ ಎಂದು ಅವರ ಬಗ್ಗೆ ತಿಳಿದುಕೊಂಡಿದ್ದೆ. ಅಲ್ಲದೇ, ಹಾಗಂತ ಕೆಲವು ಆಟಗಾರರು ನನಗೆ ಹೇಳಿದ್ದರು. ಆದರೆ ಕೊಹ್ಲಿ ಅವರನ್ನು ನಾನು ಪಂದ್ಯದ ಮುನ್ನವಾಗಲೀ, ನಂತರವಾಗಲೀ ಭೇಟಿಯಾದಾಗ ಆತ್ಮೀಯತೆಯಿಂದ ಮಾತನಾಡಿದರು. ಇದು ನಮ್ಮಿಬ್ಬರ ಮೊದಲ ಭೇಟಿಯೂ ಆಗಿತ್ತು” ಎಂದು ರಿಝ್ವಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ಹೌದು, ಕ್ರಿಕೆಟ್ ಅಂಗಣಕ್ಕೆ ಇಳಿದಾಗ ಗೆಲುವಷ್ಟೇ ನಮ್ಮ ಆದ್ಯತೆಯಾಗಿರುತ್ತದೆ. ಅಲ್ಲಿ ಭ್ರಾತೃತ್ವ ಯಾವುದೂ ಇಲ್ಲದೇ ಇರಬಹುದು. ಆದರೆ, ಮೈದಾನದ ಆಚೆಗೆ ನಾನು ಕೊಹ್ಲಿಯವರನ್ನು ಹಾಗೂ ನಮ್ಮ ಕೆಲವು ಆಟಗಾರರು ಎಂಎಸ್ ಧೋನಿ ಅವರನ್ನು ಅಷ್ಟೇ ಪ್ರೀತಿ ಮತ್ತು ಆತ್ಮೀಯತೆಯಿಂದ ಭೇಟಿಯಾದೆವು” ಎಂದು ತಿಳಿಸಿದ್ದಾರೆ.
ಇನ್ನು ಕೌಂಟಿ ಕ್ರಿಕೆಟ್ ಆಡುವ ಸಮಯದಲ್ಲಿ ಚೇತೇಶ್ವರ ಪೂಜಾರ ಜೊತೆಗಿನ ಕ್ಷಣವನ್ನೂ ನೆನಪಿಸಿಕೊಂಡ ರಿಝ್ವಾನ್, ಪೂಜಾರ ಜೊತೆಗೆ ಕೌಂಟಿಯಲ್ಲಿ ಜೊತೆಯಾಗಿ ಆಡುತ್ತಿದ್ದೆ. ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಕೆಲವೊಮ್ಮೆ ನಾನು ಅವರಿಗೆ ಉಪಟಳ ನೀಡಿದ್ದೂ ಇದೆ ಎಂದು ತಮಾಷೆಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ತಂಡದ ಎದುರು ಕ್ರಿಕೆಟ್ ಸರಣಿ ಆಡುತ್ತಿದೆ.