‘ಪ್ಯಾಕೇಜ್ ರಾಜಕಾರಣ’ ಆರಂಭ | ಬಿಹಾರ ಚುನಾವಣೆಗೂ ಮುನ್ನಾ ಮೋದಿಯವರಿಂದ 541 ಕೋಟಿ ರೂ. ಯೋಜನೆಗೆ ಚಾಲನೆ

ನವದೆಹಲಿ : ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಪ್ಯಾಕೇಜ್ ಘೋಷಣೆ’ ರಾಜಕಾರಣ ಆರಂಭವಾಗಿದೆ. ಚುನಾವಣೆ ಎದುರಿಸಲಿರುವ ಬಿಹಾರಕ್ಕೆ ಸುಮಾರು 541 ಕೋಟಿ ರೂ. ಮೊತ್ತದ ಏಳು ನಗರಾಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಪ್ರಧಾನಿ ಚಾಲನೆ ನೀಡಲಿರುವ ಏಳು ಕಾರ್ಯಕ್ರಮಗಳಲ್ಲಿ ನಾಲ್ಕು ಕಾರ್ಯಕ್ರಮಗಳು ನೀರು ಸರಬರಾಜಿಗೆ ಸಂಬಂಧಿಸಿದ್ದು, ಎರಡು ಒಳಚರಂಡಿ ತ್ಯಾಜ್ಯ ಸಂಸ್ಕರಣಾ ನಿರ್ವಹಣೆಗೆ ಸಂಬಂಧಿಸಿದ್ದು ಮತ್ತು ಇನ್ನೊಂದು ನದಿ ಶುಚಿತ್ವಕ್ಕೆ ಸಂಬಂಧಿಸಿದ್ದು.
ಕೆಲವು ಯೋಜನೆಗಳನ್ನು ಅವರು ಈ ವೇಳೆ ಉದ್ಘಾಟಿಸಲಿದ್ದಾರೆ ಮತ್ತು ಇನ್ನು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನಿರ್ವಹಿಸಲಿದ್ದಾರೆ. ಬಿಹಾರ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ (ಬಿಯುಐಡಿಸಿಒ) ಈ ಯೋಜನೆಗಳ ರೂವಾರಿಯಾಗಿದೆ.

- Advertisement -

ಪಾಟ್ನ ಮುನ್ಸಿಪಲ್ ಕಾರ್ಪೊರೇಶನ್ ನ ಬಿಯುರ್ ಮತ್ತು ಕರ್ಮಾಲಿಚಕ್ ನಲ್ಲಿ ನಮಾಮಿ ಗಂಗೆ ಮಿಶನ್ ಯೋಜನೆಯಡಿ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ. ಸಿವಾನ್ ಮತ್ತು ಛಪ್ರಾ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ ಜನರಿಗೆ ನೆರವಾಗುವಂತೆ ನೀರು ಸರಬರಾಜು ಯೋಜನೆ‌ ಉದ್ಘಾಟಿಸಲಾಗುತ್ತಿದೆ. ಇನ್ನುಳಿದ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಾಗುತ್ತಿದೆ.

- Advertisement -