ಮಡಿಕೇರಿ: ‘ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರುವ ಮೂಲಕ ಮೋದಿ ಸರ್ಕಾರ ಜನರಿಗೆ ದ್ರೋಹ ಎಸಗಿದೆ. ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುವುದಿಲ್ಲ ಎಂದು ಈ ಹಿಂದೆ ವಾಗ್ದಾನ ಮಾಡಿದ್ದ ಮೋದಿ ಅವರು, ಅದನ್ನು ಸಾರಾಸಗಟಾಗಿ ಮುರಿದಿದ್ದಾರೆ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ‘ದೇಶದ ಅರ್ಥ ವ್ಯವಸ್ಥೆ ತೀರಾ ಸಂಕಷ್ಟದಲ್ಲಿದ್ದು, ನೋಟು ರದ್ದತಿಯಿಂದ ಸಂಕಷ್ಟಕ್ಕೆ ಒಳಗಾದ ಜನರು ಕೋವಿಡ್ ಬಂದ ನಂತರ ಇನ್ನಷ್ಟು ದುರ್ಬಲ ಸ್ಥಿತಿಗೆ ಇಳಿದಿದ್ದಾರೆ. ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆಯನ್ನು ಹೆಚ್ಚಿಸಿದ ಸರ್ಕಾರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಹಾಲಿನ ಮೇಲೂ ಜಿಎಸ್‌ಟಿ ಹಾಕಿದೆ. ಇದೊಂದು ಮಹಾವಂಚನೆ’ ಎಂದು ಆರೋಪಿಸಿದರು.
‘ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸರ್ಕಾರ ಇವೆಲ್ಲವನ್ನೂ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಬಡವರ ಮೇಲೆ ತೆರಿಗೆ ಹಾಕಿ ಅವರು ದುಡಿದ ಹಣವನ್ನು ವಸೂಲು ಮಾಡುವುದು ಸಂಪನ್ಮೂಲ ಕ್ರೋಢೀಕರಣವೇ’ ಎಂದು ಪ್ರಶ್ನಿಸಿದರು.
‘ಅತಿವೃಷ್ಟಿಯಿಂದ ಅಪಾರ ನಷ್ಟಕ್ಕೆ ಗುರಿಯಾಗಿರುವ ಕೊಡಗು ಜಿಲ್ಲೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸರ್ಕಾರಕ್ಕೆ ಹೆಚ್ಚಿನ ಶಕ್ತಿಯನ್ನು ಕೊಡಗು ನೀಡಿದೆ ಎಂಬುದನ್ನು ಮರೆಯಬಾರದು. ಬಿಜೆಪಿಗೆ ಅಧಿಕಾರಿ ಕೊಟ್ಟ ಕೊಡಗನ್ನು ವಿಶೇಷವಾಗಿ ಪರಿಗಣಿಸುವಂತೆ ಇಲ್ಲಿನ ಪ್ರಬುದ್ಧ ಜನರು ಕೇಳಬೇಕು. ಕಾವೇರಿ ಮಾತೆಯ ಅವಹೇಳನ ಕುರಿತು ಮುಸ್ಲಿಂ ಯುವಕನೊಬ್ಬನನ್ನು ಬಂಧಿಸಬೇಕು ಎಂದು ಹೇಳಿಕೆ ನೀಡಿದ್ದಸಂಸದ ಪ್ರತಾಪಸಿಂಹ ಸಹಿತ ಬಿಜೆಪಿಯ ಜನಪ್ರತಿನಿಧಿಗಳು ಈಗ ಆ ಯುವಕನಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್, ಜಿಲ್ಲಾ ಸಮಿತಿ ಸದಸ್ಯರಾದ ಮನ್ಸೂರ್, ಅಬ್ದುಲ್ಲಾ ಅಡ್ಕಾರ್, ಜಿಲ್ಲಾ ಕಾರ್ಯದರ್ಶಿ ಮೇರಿ ವೇಗಸ್, ನಗರ ಘಟಕದ ಅಧ್ಯಕ್ಷ ರಿಜ್ವಾನ್ ಉಪಸ್ಥಿತರಿದ್ದರು.
ಸುದ್ಧಿಗೋಷ್ಟಿಯ ಬಳಿಕ ಇಲ್ಲಿನ ಚೌಕಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.