ನವದೆಹಲಿ: 2024ರ ಲೋಕಸಭಾ ಎಲೆಕ್ಷನ್ ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗ ದಿನಾಂಕ ಘೋಷಣೆ ಸದ್ಯದಲ್ಲೇ ಮಾಡಲಿದೆ. ಎಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡನೆ ಮಾಡಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಫೆಬ್ರವರಿ 1ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಗದ ರಹಿತ ಬಜೆಟ್ ಮಂಡಿಸಲಾಗುತ್ತಿದ್ದು, ಈ ಬಾರಿಯು ಪೇಪರ್ ಲೆಸ್ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಜನವರಿ 31ರಿಂದ ಫೆಬ್ರವರಿ 9ರವರೆಗೆ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಜನವರಿ 31ರಂದು ಸರ್ಕಾರದ 5 ವರ್ಷಗಳ ಸಾಧನೆ ಕುರಿತು ಜಂಟಿ ಸದನದಲ್ಲಿ ಮಾತನಾಡುವ ಮೂಲಕ ಅಧಿವೇಶನ ಆರಂಭಗೊಳ್ಳಲಿದೆ.
ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಪೂರ್ವ ಬಜೆಟ್‌ನಲ್ಲಿ ದೇಶದ 5 ಪ್ರಮುಖ ವಿಭಾಗಗಳಾದ ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗದ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.