ನವದೆಹಲಿ: ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಹರೇನ್ ಪಾಂಡ್ಯರಿಗೆ ಮಾಡಿದ ಗತಿ ನನಗೂ ಮಾಡಲಾರರು ಎಂದು ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿ ಮತ್ತು ಶಾ ನನ್ನನ್ನು ಹರೇನ್ ಪಾಂಡ್ಯರಂತೆ ಮಾಡುವುದಿಲ್ಲ ಎಂದು ವಿಶ್ವಾಸವಿರಿಸಿದ್ದೇನೆ. ಹಾಗೆ ಮಾಡುವುದಿದ್ದರೆ ನಾನು ನನ್ನ ಸ್ನೇಹಿತರನ್ನು ಎಚ್ಚರಿಸುವುದು ಅಗತ್ಯ. ನಾನು ಪಡೆದಷ್ಟು ಒಳ್ಳೆಯದನ್ನು ಹಿಂದಿರುಗಿಸುತ್ತೇನೆ ಎಂದು ನೆನಪಿಡಿ. ಆರೆಸ್ಸೆಸ್ ನ ಉನ್ನತ ನಾಯಕರನ್ನು ಇವರಿಬ್ಬರು ವಂಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಸದಾ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹೇಳಿಕೆಯನ್ನು ನೀಡುತ್ತಾ ವಾಗ್ದಾಳಿ ನಡೆಸುವ ಮಾಜಿ ಸಂಸದ ಸುಬ್ರಮಣಿಯನ್ ಅವರ ಈ ಟ್ವೀಟ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಹರೇನ್ ಪಾಂಡ್ಯಾ ಅವರ ಕೊಲೆ ಪ್ರಕರಣದಲ್ಲಿ ಮೋದಿ ಮತ್ತು ಅಮಿತ್ ಶಾ ಅವರು ಜಂಟಿಯಾಗಿ ಶಾಮೀಲಾಗಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಸ್ವಾಮಿ, ಹರೇನ್ ಪಾಂಡ್ಯಾರನ್ನು ಬಿಜೆಪಿಯಿಂದ ಮೂಲೆಗುಂಪು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಹರೇನ್ ಪಾಂಡ್ಯಾ ಅವರು 2002ರ ಗುಜರಾತ್ ಹಿಂಸಾಚಾರದ ವೇಳೆ ರಾಜ್ಯದ ಗೃಹಸಚಿವರಾಗಿದ್ದರು. ಗುಜರಾತ್ ಹತ್ಯಾಕಾಂಡಕ್ಕಿಂತ ಮೊದಲು ಮೋದಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದ್ದರು. ಇದಾದ ಬೆನ್ನಲ್ಲೇ ಮೂಲೆಗುಂಪಾದ ಪಾಂಡ್ಯ ಅವರು 2003ರಲ್ಲಿ ಭೀಕರವಾಗಿ ಕೊಲೆಯಾಗಿದ್ದರು.