ನಮಾಝ್ ನಿರತ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ: ಆಕ್ರೋಶ ವ್ಯಕ್ತಪಡಿಸಿದ ಉವೈಸಿ

Prasthutha|

ಹೈದರಾಬಾದ್: ಗುಜರಾತ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳು ನಮಾಝ್ ಮಾಡುತ್ತಿರುವಾಗ ಗುಂಪೊಂದು ಹಲ್ಲೆ ನಡೆಸಿದ ಆಘಾತಕಾರಿ ಪ್ರಕರಣಕ್ಕೆ ಅಖಿಲ ಭಾರತ ಇತ್ತೆಹಾದುಲ್ ಮಜ್ಲಿಸ್-ಎ-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಉವೈಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಅವರು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಏನು ಅವಮಾನ ಇದು? ಮುಸ್ಲಿಮರು ತಮ್ಮ ಧರ್ಮವನ್ನು ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ನಿಮ್ಮ ಭಕ್ತಿ ಮತ್ತು ಧಾರ್ಮಿಕ ಘೋಷಣೆಗಳು ಮುನ್ನೆಲೆಗೆ ಬರುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.

ಮುಸಲ್ಮಾನರನ್ನು ಕಂಡರೆ ಅನಾವಶ್ಯಕವಾಗಿ ಕೋಪಗೊಳ್ಳುವುದು ಯಾಕೆ? ಇದು ಸಾಮೂಹಿಕ ಮೂಲಭೂತವಾದವಲ್ಲದಿದ್ದರೆ ಮತ್ತೇನು? ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತವರು ರಾಜ್ಯದಲ್ಲಿ ನಡೆದಿದೆ. ಇದರ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸಲು ಅವರು ಮಧ್ಯಪ್ರವೇಶಿಸುತ್ತಾರಾ? ದೇಶೀಯ ಮುಸ್ಲಿಂ ವಿರೋಧಿ ದ್ವೇಷ ಭಾರತದ ಅಭಿಮಾನವನ್ನು ನಾಶಪಡಿಸುತ್ತಿದೆ ಎಂದು ಉವೈಸಿ ಹೇಳಿದ್ದಾರೆ.

- Advertisement -

ಘಟನೆ ಸಂಬಂಧವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅಹಮದಾಬಾದ್ ಪೊಲೀಸ್ ಆಯುಕ್ತ ಜಿಎಸ್ ಮಲಿಕ್, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಗೆ 9 ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ 5 ಮಂದಿ ಡಿಸಿಪಿಗಳು ಇರುತ್ತಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ 10.51ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಪೊಲೀಸರು ರಾತ್ರಿಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ 20 ರಿಂದ 25 ಜನರ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಬಾಂಗ್ಲಾದೇಶ, ಸಿರಿಯಾ ಮತ್ತು ಕೆಲವು ಆಫ್ರಿಕನ್ ದೇಶಗಳ ಮುಸ್ಲಿಂ ವಿದ್ಯಾರ್ಥಿಗಳು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದು, ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾರೆ. ರಮಝಾನ್ ಆಗಿರುವುದರಿಂದ ಶನಿವಾರ ರಾತ್ರಿ ತಮ್ಮ ಕೊಠಡಿಯಲ್ಲಿ ತರಾವೀಹ್ ನಮಾಝ್ ಮಾಡುತ್ತಿದ್ದರು. ಈ ವೇಳೆ ಜೈಶ್ರೀರಾಂ ಘೋಷಣೆಯೊಂದಿಗೆ ನುಗ್ಗಿದ ಗುಂಪು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಥಳಿಸಿ ಮೊಬೈಲ್, ಲ್ಯಾಪ್‌ಟಾಪ್, ಬೈಕ್‌ಗಳನ್ನು ಒಡೆದು ಹಾಕಿದ್ದಾರೆ.



Join Whatsapp