ಕೊಡಗು: MLC ಚುನಾವಣೆಯ ಮತದಾನ ಅರಿವು ಸಭೆ, ಗ್ರಾ.ಪಂ ಅಧ್ಯಕ್ಷೆ ಸೇರಿದಂತೆ ಸದಸ್ಯರು ಗೈರು

Prasthutha|

► ಮೂರು ದಿನಗಳಿಂದ ನಾಪತ್ತೆಯಾಗಿರುವ ಅಧ್ಯಕ್ಷರು?

- Advertisement -

ಸಿದ್ದಾಪುರ: ವಿಧಾನ ಪರಿಷತ್ ಚುನಾವಣೆಯ ಮತದಾನದ ಬಗ್ಗೆ ಅರಿವು ಮೂಡಿಸುವ ಸಭೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ 16 ಮಂದಿ ಸದಸ್ಯರು ಗೈರಾಗಿರುವ ಪ್ರಸಂಗ ನಡೆದಿದೆ.

ಜಿಲ್ಲೆಯಲ್ಲೇ ಅತ್ಯಧಿಕ ಸದಸ್ಯರನ್ನು (25 ಮಂದಿ) ಒಳಗೊಂಡಿರುವ ಸಿದ್ದಾಪುರ ಗ್ರಾಮ ಪಂಚಾಯತಿ ಸದಸ್ಯರಿಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು MLC ಮತದಾನದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 25 ಮಂದಿ ಸದಸ್ಯರ ಪೈಕಿ ಕೇವಲ 9 ಮಂದಿ ಸದಸ್ಯರು ಮಾತ್ರ ಹಾಜರಿದ್ದರು. ಮತದಾನ ಪ್ರಕ್ರಿಯೆ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್ ಮೇದಪ್ಪ ಮತ್ತು ಕಾರ್ಯದರ್ಶಿ ವಿ.ಟಿ ಮೋಹನ್ ಮಾಹಿತಿ ನೀಡಿದರು.

- Advertisement -

ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ: ಕಳೆದ ಮೂರು ದಿನಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಹಲವು ಸದಸ್ಯರುಗಳು ನಾಪತ್ತೆಯಾಗಿದ್ದಾರೆ. ಬಡ ಜನರು ವಿವಿಧ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯತಿ ಬಂದು ವಾಪಾಸು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜಕೀಯ ರಹಿತವಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆದಿದ್ದು, ಇದೀಗ ವಿಧಾನ ಪರಿಷತ್ ಚುನಾವಣೆಯಿಂದಾಗಿ ಅಧ್ಯಕ್ಷರು ಹಾಗೂ ಸದಸ್ಯರು ರೆಸಾರ್ಟ್ ನಲ್ಲಿ ವಾಸ್ತವ್ಯದಲ್ಲಿದ್ದಾರೆ. ನಾಪತ್ತೆಯಾಗಿರುವ ಅಧ್ಯಕ್ಷರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಗ್ರಾಮ ಪಂಚಾಯತಿ ಸದಸ್ಯ ಪಳನಿಸ್ವಾಮಿ ತಿಳಿಸಿದರು.

ಕಳೆದ 11 ತಿಂಗಳಿನಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಶಾಪ ಹಾಕುತ್ತಿದ್ದಾರೆ. ಆಡಳಿತ ವೈಫಲ್ಯದ ವಿರುದ್ಧ ಸಾರ್ವಜನಿಕರು ಸೇರಿಸಿ ಪ್ರತಿಭಟಿಸುವುದಾಗಿ ಗ್ರಾ.ಪಂ ಸದಸ್ಯ ವಿ.ಕೆ ಜಾಫರ್ ತಿಳಿಸಿದರು.

ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ 15, ಕಾಂಗ್ರೆಸ್ ಬೆಂಬಲಿತ 9 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಇಂದಿನ ಸಭೆಯಲ್ಲಿ ಬಿಜೆಪಿ ಬೆಂಬಲಿತ 15 ಮತ್ತು ಕಾಂಗ್ರೆಸ್ ಬೆಂಬಲಿತ 1 ಸದಸ್ಯರು ಗೈರಾಗಿದ್ದರು

ಈ ಸಂದರ್ಭ ಸದಸ್ಯರಾದ ಪ್ರಮೀಳಾ, ಎಂ.ಎಸ್ ಶಾಹಿನುಲ್ಲಾ, ಎ.ಎಸ್ ಹಸ್ಸನ್, ಶೀಲಾ, ಸೆಮೀರಾ, ಪ್ರೇಮಾ ಮತ್ತು ಶುಕೂರ್ ಇದ್ದರು.



Join Whatsapp