ಚಾಮರಾಜನಗರ: ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಭಾವಚಿತ್ರ ಇರುವ ಪೋಸ್ಟರ್’ಗೆ ಸೆಗಣಿ ಬಳಿದು ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಎನ್.ಮಹೇಶ್ ಅವರು, ಈ ಕೃತ್ಯ ಎಸಗಿದವರನ್ನು ತಲೆ ಕೆಟ್ಟವರು, ಈ ರೀತಿ ಮಾಡಿದವರ ವಿರುದ್ಧ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕೊಳ್ಳೆಗಾಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ಹಾಕಿದ್ದ ಮತ್ತೊಮ್ಮೆ ಬಿಜೆಪಿ ಎಂಬ ಪೋಸ್ಟರ್’ಗೆ ಸೆಗಣಿ ಬಳಿಯಲಾಗಿದೆ. ಇನ್ನೊಂದೆಡೆ ಎನ್. ಮಹೇಶ್ ಭಾವಚಿತ್ರದ ಮೇಲೆ 40% ಎಂದು ಬರೆದಿರುವುದು ಕಂಡುಬಂದಿದೆ.
ಶಾಸಕ ಎನ್.ಮಹೇಶ್ 40% ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರು ನೀಡಲಿ. ಆದರೆ ಬೀದಿಬದಿಯಲ್ಲಿ ಈ ರೀತಿ ಬರೆದು ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ, ಅದನ್ನು ಬರೆದಿರುವವರು ವಿಕೃತ ಮನಸ್ಸಿನವರು. ಹದ್ದು ಮೀರಿದರೆ ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದಿರುವ ಮಹೇಶ್, ಈ ಪ್ರಕರಣದಿಂದ ನನ್ನ ವರ್ಚಸ್ಸಿಗೆ ಯಾವುದೇ ಹಾನಿಯಾಗಲ್ಲ ಎಂದಿದ್ದಾರೆ.