ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಲಿಂಬಾವಳಿ ಬಹಿರಂಗ ಕ್ಷಮೆ ಕೇಳಲಿ: ಎಸ್ಡಿಪಿಐ ಉಪಾಧ್ಯಕ್ಷೆ ಪ್ರೊ. ಸಯಿದಾ ಸಾದಿಯ

Prasthutha|

ಬೆಂಗಳೂರು: ಮಹಿಳೆಯನ್ನು ಗೌರವಿಸುವುದು ಬಿಜೆಪಿಯವರ ಸಂಸ್ಕೃತಿಯಲ್ಲಿಯೇ ಇಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ ಎಂದು ಎಸ್‍ಡಿಪಿಐ ಉಪಾಧ್ಯಕ್ಷೆ ಪ್ರೊ. ಸಯಿದಾ ಸಾದಿಯ ಹೇಳಿದ್ದಾರೆ.

- Advertisement -

ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರ ಜೊತೆ ದರ್ಪದಿಂದ ನಡೆದುಕೊಂಡ ಪ್ರಕರಣದ ಕುರಿತು ಮಾತಾಡಿದ ಪ್ರೊ. ಸಯಿದಾ ಸಾದಿಯ, ಅಪ್ರಾಪ್ತ ಬಾಲಕಿಯರ ಅತ್ಯಾಚಾರ ವಿಚಾರವಾಗಿ ಮುರುಘಾ ಮಠದ ಶ್ರೀಗಳ ಬಂಧನ ಎಂಬ ವಿಳಂಬ ನಾಟಕದ ಮೂಲಕ ಹೆಣ್ಣು ಮಕ್ಕಳ ವಿಚಾರವಾಗಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎಷ್ಟು ಗಂಭೀರವಾಗಿದೆ ಎಂದು ತೋರಿಸಿದ್ದಾರೆ, ಅದರ ನಡುವೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರ ಜೊತೆ ದರ್ಪದಿಂದು ನಡೆದುಕೊಂಡಿದ್ದು, ತಮಗಾದ ಸಮಸ್ಯೆಯ ಬಗ್ಗೆ ಮನವಿ ಪತ್ರದೊಂದಿಗೆ ಬಂದ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ ಅವರ ಮನವಿ ಪತ್ರವನ್ನು ಹರಿದು ಹಾಕಿದ್ದಾರೆ. ಈ ಘಟನೆ ಬಿಜೆಪಿಗೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ತೋರಿಸಿಕೊಡುತ್ತದೆ ಎಂದು ಅವರು ಹೇಳಿದರು.

ಮೊದಲಿಗೆ ಏಕಾಏಕಿ ಮನೆ ತೆರವಿಗೆ ಅಧಿಕಾರಿಗಳು ಬರುತ್ತಾರೆ, ನೋಟಿಸ್ ಎಲ್ಲಿ? ಎಂದು ಕೇಳಿದಾಗ ಹೊರಟು ಹೋಗುತ್ತಾರೆ ಎಂದರೆ ಈ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆಯುತ್ತಿದೆ ಎಂದು ತೋರಿಸುತ್ತದೆ ಎಂದು ಅವರು ಆರೋಪಿಸಿದರು.ಮನೆಯ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ನೊಂದ ಮಹಿಳೆ ಈ ವಿಚಾರವಾಗಿ ಅಲ್ಲಿಗೆ ಭೇಟಿ ನೀಡಿದ ಶಾಸಕರ ಬಳಿ ಮನವಿಪತ್ರ ಹಿಡಿದು ತೆರಳಿದಾಗ ಶಾಸಕರಿಂದ ಈ ರೀತಿಯಾದಂತಹ ದರ್ಪ ಪ್ರದರ್ಶನವಾಗಿದೆ ಎಂದು ಘಟನೆಯ ಬಗ್ಗೆ  ಪ್ರೊ. ಸಯಿದಾ ಟೀಕಿಸಿದರು

- Advertisement -

ಈ ಘಟನೆ ನಡೆದ ಬೆನ್ನಲ್ಲೇ ಲಿಂಬಾವಳಿ ಅವರ ಈ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಯಿತು. ತಮ್ಮ ದರ್ಪದ ನಡವಳಿಕೆಯನ್ನು ಸಮರ್ಥಿಸುವ ಭರದಲ್ಲಿ ನಾನೇನು ರೇಪ್ ಮಾಡಿದ್ದೀನ? ಎಂದು ಕೇಳುವ ಮೂಲಕ ಈಗಾಗಲೇ ಕೆಳ ಮಟ್ಟಕ್ಕೆ ಜಾರಿದ್ದ ಅವರ ನಾಲಿಗೆ ಮತ್ತು ನಡವಳಿಕೆ ಇನ್ನೂ ತಳಮಟ್ಟಕ್ಕೆ ಜಾರಿದೆ. ಇವರದು ತೀರಾ ಕೀಳು ಮಟ್ಟದ ಸಂಸ್ಕೃತಿ, ಹಿರಿಯ ಶಾಸಕರು ಮತ್ತು ಮಾಜಿ ಸಚಿವರಾಗಿದ್ದವರು ಇಂತಹ ಮನಸ್ಥಿತಿ ಹೊಂದಿರುತ್ತಾರೆ ಎಂದರೆ ಇವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರು ಮೊನ್ನೆ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡಿದ್ದಾರೆ. ನಮ್ಮಲ್ಲಿ ಮಹಿಳೆಯರನ್ನು ಅವಮಾನಿಸುವ ಕುಬ್ಜ ಮನಸ್ಥಿತಿ ಮನೆ ಮಾಡುತ್ತಿದೆ ಎಂದಿದ್ದ ಪ್ರಧಾನಿ, ಮಹಿಳೆಯರನ್ನು ಗೌರವಿಸುವುದು ದೇಶದ ಬಹುಮುಖ್ಯ ಆಧಾರ ಸ್ತಂಭ ಎಂದೂ ಹೇಳಿದ್ದರು.  ನಾರಿ ಶಕ್ತಿಯ ಬಗ್ಗೆ ಮಾತಾಡಿದ್ದ ಅವರು ಪ್ರತಿಯೊಬ್ಬರೂ ಮಹಿಳೆಯನ್ನು ಗೌರವುಸುವ ಬಗ್ಗೆ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಬಹುಶಃ ಆ ಪ್ರತಿಜ್ಞೆ ಸಮಯದಲ್ಲಿ ಅರವಿಂದ ಲಿಂಭಾವಳಿ ಉಪಸ್ಥಿತರಿರಲಿಲ್ಲ ಎಂದು ಕಾಣುತ್ತದೆ.

ಹಿಂದಿನಿಂದ ಮೋದಿ ಹೇಳಿಕೊಂಡು ಬರುತ್ತಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬುದರ ನಿಜ ಅರ್ಥ ಈ ರೀತಿಯಲ್ಲಿ ಮಹಿಳೆಯನ್ನು ಅವಮಾನಿಸುವುದೇ ಇರಬೇಕು, ಮಹಿಳೆಯರನ್ನು ದರ್ಪದಿಂದ ನಡೆಸಿಕೊಳ್ಳುವುದೇ ಬಿಜೆಪಿಯ ಅಸಲಿ ಸಂಸ್ಕೃತಿ ಎಂದ ಅವರು ಇದಕ್ಕೆ ಜನ ಮುಂದಿನ ದಿನಗಳಲ್ಲಿ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಲಿಂಬಾವಳಿ ಅವರ ಈ ನಡವಳಿಕೆ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಶಾಸಕ ಅರವಿಂದ ಲಿಂಬಾವಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷೆ ಆಗ್ರಹಿಸಿದರು.

Join Whatsapp