ಬೆಂಗಳೂರು: ಶಾಸಕ ಬಿ.ಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹಾಗಾರನಾಗಿ ನೇಮಕಗೊಳಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಬಸವರಾಜ್ ರಾಯರೆಡ್ಡಿ, ಆರ್.ವಿ. ದೇಶಪಾಂಡೆ ಅವರಿಗೂ ಸ್ಥಾನ ನೀಡಲಾಗಿದ್ದು, ಮೂವರಿಗೂ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಲಾಗಿದೆ.
ಈ ಮೂವರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದವರಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರನಾಗಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಮೂವರಿಗೂ ರಾಜ್ಯ ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.
ಈ ಮೂಲಕ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ಹೊರಹಾಕುತ್ತಿದ್ದ ಹಾಗೂ ಕೆಲ ಸಚಿವರ ನಡೆಯ ಬಗ್ಗೆ ಆಗಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯುತ್ತಾ ಸುದ್ದಿಯಲ್ಲಿದ್ದ ಮೂವರು ಶಾಸಕರಿಗೆ ವಿಶೇಷ ಹುದ್ದೆಯ ಜವಾಬ್ದಾರಿ ಸಿಕ್ಕಂತಾಗಿದೆ.