ರಾಯಿಪುರ: ಛತ್ತೀಸ್’ಗಡದ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ಸಿನ 85ನೇ ಮಹಾಧಿವೇಶನ ಸಂಬಂಧದ ಜಾಹೀರಾತುಗಳಲ್ಲಿ ಚಾರಿತ್ರಿಕ ಮುಸ್ಲಿಂ ನಾಯಕರ ಫೋಟೋ ನಾಪತ್ತೆಯಾಗಿರುವುದು ಕಂಡು ಬಂದಿದೆ.
ಅಲ್ಪಸಂಖ್ಯಾತ ನಾಯಕರು ಇದರ ಬಗ್ಗೆ ಆಕ್ಷೇಪ ಎತ್ತಿದ್ದರು. ಬಳಿಕ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಿದ್ದಾರೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ.
“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಆರಂಭದಿಂದಲೂ ಮುಸ್ಲಿಂ ನಾಯಕರು ಕೊಡುಗೆ ನೀಡಿದ್ದಾರೆ; ಕಾಂಗ್ರೆಸ್ಸಿನ ಎಲ್ಲ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ದೇಶ ಒಡೆದು ಒಂದು ಭಾಗ ಪಾಕಿಸ್ತಾನವಾದಾಗಲೂ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರು ಭಾರತ ದೇಶದ ಒಗ್ಗಟ್ಟಿನಲ್ಲಿ ತಮ್ಮನ್ನು ಅರ್ಪಿಸಿಕೊಂಡವರು. ಯಾರೋ ಕೆಲವರು ಅವರ ಚರಿತ್ರೆಯನ್ನು ಅಳಿಸಿ ಹಾಕಲು ನೋಡುತ್ತಿರುವಂತಿದೆ ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಮೌಲಾನಾ ಅಬುಲ್ ಕಲಾಂ ಅಜಾದ್, ಡಾ. ಮುಕ್ತಾರ್ ಅಹ್ಮದ್ ಅನ್ಸಾರಿ, ರಫಿ ಅಹ್ಮದ್ ಕಿದ್ವಾಯಿ ಇವರೆಲ್ಲ ಕಾಂಗ್ರೆಸ್ಸಿನ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾಗಿದ್ದರು. ಅವರ ಫೋಟೋಗಳ ಕಾಣದಿರುವುದೇಕೆ? ಎಂದು ಹಲವು ಮುಸ್ಲಿಮ್ ನಾಯಕರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಬಗ್ಗೆ ಕ್ಷಮಾಪಣೆ ಕೇಳಿದೆ.
“ಇಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಒಂದು ಜಾಹೀರಾತಿನಲ್ಲಿ ಮೌಲಾನಾ ಅಜಾದ್ ರ ಫೋಟೋ ಬಂದಿಲ್ಲ. ಇದು ಕ್ಷಮಿಸಲಾಗದ ತಪ್ಪು. ಈ ಬಗ್ಗೆ ಜವಾಬ್ದಾರಿ ಹೊರಿಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅವರು ಯಾವಾಗಲೂ ಕಾಂಗ್ರೆಸ್ಸಿನ ಗಣ್ಯರಾಗಿದ್ದು, ಭಾರತ ಮತ್ತು ನಮಗೆ ಸ್ಪೂರ್ತಿ ನೀಡುವ ವ್ಯಕ್ತಿಯಾಗಿದ್ದರು, ಈಗಲೂ ಅದೇ ಸ್ಪೂರ್ತಿದಾಯಕ ವ್ಯಕ್ತಿತ್ವ ಅವರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಮುಖ್ಯಸ್ಥ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಆದರೆ ಸಭಾಂಗಣದ ವೇದಿಕೆಯಲ್ಲಿ ಮೌಲಾನಾ ಅಜಾದ್ ಅವರ ಫೋಟೋ ಮುಖ್ಯವಾಗಿ ಇರುವುದರ ಫೋಟೋವನ್ನು ಸಹ ಕಾಂಗ್ರೆಸ್ ಟ್ವೀಟ್ ಮಾಡಿದೆ.