ನಾಪತ್ತೆಯಾಗಿದ್ದ ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ !

Prasthutha|

ಮಂಗಳೂರು : ಕಳೆದ ಎರಡು ದಿನಗಳಿಂದ ಕಾಣೆಯಾಗಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಬೆಂಗಳೂರು ಮಕ್ಕಳ ಮಿಸ್ಸಿಂಗ್ ಪ್ರಕರಣ ಸುಖಾಂತ್ಯ ಕಂಡಿದ್ದು, ಇದೀಗ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಮಕ್ಕಳ ನಾಪತ್ತೆಯ ಬಗ್ಗೆ ಆತಂಕಗೊಂಡಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

ನಾಪತ್ತೆಯಾಗಿದ್ದ ಅಮೃತವರ್ಷಿಣಿ, ಭೂಮಿ, ಚೇತನ್, ರಾಯನ್ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ನಗರದ ಅಟೋ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಕ್ಕಳ ಪತ್ತೆಯ ಬಗ್ಗೆ ಪಾಂಡೇಶ್ವರ ಪೊಲೀಸರು ಖಚಿತ ಪಡಿಸಿದ್ದಾರೆ.

ನಾಪತ್ತೆಯಾಗಿದ್ದ 7 ಮಂದಿ ಮಕ್ಕಳಲ್ಲಿ ನಿನ್ನೆ ಬೆಳಿಗ್ಗೆ ಮೂವರು ಪತ್ತೆಯಾಗಿದ್ದು ಉಳಿದ  ಅಮೃತವರ್ಷಿಣಿ (21), ಭೂಮಿ(12), ಚಿಂತನ್(12), ರಾಯನ್(12) ಸೇರಿ ನಾಲ್ವರು  ಪತ್ತೆಯಾಗಿದ್ದಾರೆ.

- Advertisement -

ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ ನ ನಿವಾಸಿಗಳಾದ ನಾಲ್ವರು ಮಕ್ಕಳನ್ನು ಪಾಂಡೇಶ್ವರ ಪೊಲೀಸರು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದಾರೆ.

ಮನೆಯಿಂದ ಹೋಗುವಾಗ ಚಿನ್ನದ ನೆಕ್ಲೆಸ್, ಹಣ ತೆಗೆದುಕೊಂಡು ಹೋಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ,

ಅಮೃತವರ್ಷಿಣಿ  70 ಗ್ರಾಂ ಚಿನ್ನದ ನೆಕ್ಲೆಸ್, 3 ಸಾವಿರ ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ನಾಪತ್ತೆ ಮಕ್ಕಳ ದಾಖಲೆಯನ್ನು ಎಲ್ಲಾ ಠಾಣೆಗಳಿಗೆ ರವಾನಿಸಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದಾಗ ಮಂಗಳೂರು ಬಳಿ ಮಕ್ಕಳು ಸಿಕ್ಕಿದ್ದಾರೆ.

ಮಕ್ಕಳ ಪತ್ತೆಗೆ ಸೋಲದೇವನಹಳ್ಳಿ ಠಾಣೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಒಂದೆಡೆ ಮಕ್ಕಳ ಪೋಷಕರು ಪೊಲೀಸರ ಮೇಲೆ ಒತ್ತಡ ಹಾಕಿದರೆ ಮತ್ತೊಂದೆಡೆ ಮೇಲಧಿಕಾರಿಗಳಿಂದಲೂ ಒತ್ತಡದ ಹಿನ್ನೆಲೆಯಲ್ಲಿ ಸವಾಲಾಗಿ ಪರಿಣಮಿಸಿದ್ದ ನಾಪತ್ತೆ ಪ್ರಕರಣವು ಸುಖಾಂತ್ಯ ಕಂಡಿದೆ.

ಪತ್ತೆಯಾಗಿದ್ದು ಹೇಗೆ: ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಸೋಲದೇವನಹಳ್ಳಿಯ ಪೊಲೀಸರು ಎಲ್ಲಾ ಕಡೆಗೂ ಮಕ್ಕಳ ಮಾಹಿತಿಯನ್ನು ರವಾನಿಸಿದ್ದರು. ಮಕ್ಕಳು ನಗರದಿಂದ ರೈಲಿನಲ್ಲಿ ಪ್ರಯಾಣ ಮಾಡಿ ಮಂಗಳೂರಿನಲ್ಲಿ ಇಳಿದಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ನಾಪತ್ತೆಯಾಗಿದ್ದ ಮಕ್ಕಳನ್ನು ಗುರುತು ಹಿಡಿದು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಮಕ್ಕಳನ್ನು ಒಪ್ಪಿಸಿದ್ದಾನೆ.

ಟ್ರಿಪ್​ ಗೆ ಹೋದೆವು:

ಪತ್ತೆಯಾದ ಮಕ್ಕಳಿಗೆ ಪಾಂಡೇಶ್ವರ ಠಾಣೆ ಪೊಲೀಸರು ತಿಂಡಿ ನೀಡಿ ವಿಚಾರಣೆ ನಡೆಸಿದಾಗ ನಾವು ಮನೆಯಲ್ಲಿ ಟ್ರಿಪ್​ಗೆ ಕರೆದುಕೊಂಡು ಹೋಗಿ ಅಂದರೆ ಅವರು ಕರೆದುಕೊಂಡು  ಹೋಗುತ್ತಿರಲಿಲ್ಲ. ನಾವೇ ಹೋಗುತ್ತೀವೆ ಎಂದರೂ ಕಳಿಸುತ್ತಿರಲಿಲ್ಲ. ಹೀಗಾಗಿ ನಾವೆಲ್ಲ ವಾಕಿಂಗ್ ​ಗೆ ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೊರ ಬಂದು ಟ್ರಿಪ್​ ಗೆ ಬಂದೆವು ಎಂದು ತಿಳಿಸಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಿದೆ.

ಚಿನ್ನ ದೋಚಲು ಯುವತಿ ಸಂಚು

ನಾಪತ್ತೆಯಾಗಿದ್ದ ಮಕ್ಕಳನ್ನು ಯುವತಿ  ಅಮೃತವರ್ಷಿಣಿ(21) ಕರೆದುಕೊಂಡು ಎಲ್ಲೆಡೆ ಸುತ್ತಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರಿನಿಂದ ಬೆಳಗಾವಿಗೆ ನಂತರ ಬೆಳಗಾವಿಯಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಅಲ್ಲದೆ ಮತ್ತೆ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರು ಮೆಜೆಸ್ಟಿಕ್ ಗೆ ತೆರಳಿದ್ದಾರೆ. ಪುನಃ ಮೆಜೆಸ್ಟಿಕ್ ನಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸಿರುವುದಾಗಿ ಯುವತಿ ಬಾಯ್ಬಿಟ್ಟಿದ್ದಾಳೆ.

ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಯುವತಿ ಚಿನ್ನಾಭರಣವನ್ನು ಕಸದ ತೊಟ್ಟಿಗೆ ಎಸೆದಿರುವುದಾಗಿ ತಿಳಿಸಿದ್ದಾಳೆ. ಮಕ್ಕಳು ಮನೆಯಿಂದ ತಂದಿದ್ದ ಚಿನ್ನಾಭರಣದೊಂದಿಗೆ ಯುವತಿ ನಾಪತ್ತೆಯಾಗುವ ಸಂಚು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಸ್ಸಿನಿಂದ ಇಳಿದು ಕೈಯಲ್ಲಿದ್ದ ಚಿನ್ನಾಭರಣವನ್ನು ಕಸದ ತೊಟ್ಟಿಗೆ ಎಸೆದಿದ್ದು,  ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



Join Whatsapp