ಇನ್ನೂ ಪತ್ತೆಯಾಗದ ನಟಿ ಜಯಪ್ರದಾ: ಬಿಜೆಪಿ ನಾಯಕಿಯ ಪತ್ತೆಗೆ ವಿಶೇಷ ತಂಡ ರಚನೆ

Prasthutha|

ಉತ್ತರಪ್ರದೇಶ: ನಟಿ, ಬಿಜೆಪಿ‌ ನಾಯಕಿ, ಮಾಜಿ ಸಂಸದೆ ಜಯಪ್ರದಾ ಇನ್ನೂ ಪತ್ತೆಯಾಗಿಲ್ಲ. ಅವರ ಪತ್ತೆಗೆ ರಾಂಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

- Advertisement -

ಎರಡು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡಿರುವ ಜಯಪ್ರದಾ ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದು ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಹೇಳಿದ್ದಾರೆ.

ಜನವರಿ 10 ರೊಳಗೆ ಜಯಪ್ರದಾ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಆ ತಂಡಕ್ಕೂ ಅವರನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ದ್ವಿವೇದಿ ತಿಳಿಸಿದ್ದಾರೆ.

- Advertisement -

ಜಯಪ್ರದಾ ಅವರು 2019ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿತ್ತು.

ಎರಡೂ ಪ್ರಕರಣಗಳ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಯಪ್ರದಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಜಯಪ್ರದಾ ಅವರಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅವರು ಇದುವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ.

Join Whatsapp