ಜೈಪುರ : ಗ್ರಾಮ ಪಂಚಾಯಿತಿ ಏರಿಯಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ ಆರ್ಟಿಐ ಕಾರ್ಯಕರ್ತ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಬರ್ಮರ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರ್ಯಕರ್ತ ಅಮ್ರಾರಾಮ್ ಗೊದಾರ ಎಂಬುವರ ಮೇಲೆ ಕಬ್ಬಿಣದ ಸಲಾಕೆಯಿಂದ ಬಡಿದು ಕೈಕಾಲುಗಳನ್ನು ಮುರಿದಿದ್ದಾರೆ. ಅಲ್ಲದೆ, ಮೊಳೆಗಳಿಂದ ಕೈಕಾಲುಗಳ ಮೇಲೆ ಚುಚ್ಚಿ ಚಿತ್ರಹಿಂಸೆಯನ್ನು ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೊದಾರ ಅವರನ್ನು ಜೋಧ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಬರ್ಮರ್ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭಾರ್ಗವ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೋದಾರ ಆರೋಗ್ಯವನ್ನು ವಿಚಾರಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ನಾಲ್ಕು ತಂಡಗಳನ್ನು ಕಳುಹಿಸಿದ್ದು, ಆರೋಪಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುವುದು ಎಂದಿದ್ದಾರೆ.