ಮಾವಿನಹಣ್ಣು ಕಳ್ಳತನಕ್ಕೆ ಬಂದಿದ್ದಾರೆಂದು ಆರೋಪಿಸಿ ಅಪ್ರಾಪ್ತ ಬಾಲಕರಿಗೆ ಸೆಗಣಿ ತಿನ್ನಿಸಿದ ದುರುಳರು !

Prasthutha|

ಮೆಹಬೂಬಾಬಾದ್ : ಕದಿಯಲು ಬಂದಿದ್ದಾರೆ ಎಂಬ ಶಂಕೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿಗೆ ಧನದ ಸೆಗಣೆಯನ್ನು ಬಲವಂತವಾಗಿ ತಿನ್ನಿಸಿ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ತೊರುರು ಪಟ್ಟಣದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಣ್ಣಿನ ತೋಟದಲ್ಲಿ ಮಾವಿನ ಹಣ್ಣುಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಗುರುವಾರ ಸಂಜೆ ಇಬ್ಬರು ಬಾಲಕರಿಗೆ ತೀವ್ರವಾಗಿ ಥಳಿಸಿ ಹಸುವಿನ ಸೆಗಣಿಯನ್ನು ತಿನ್ನಿಸಿತ್ತು. ಈ ಘಟನೆಯನ್ನು ವ್ಯಕ್ತಿಯೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು. 17 ಮತ್ತು 15 ವರ್ಷದ ಅಪ್ರಾಪ್ತ ಬಾಲಕರಿಗೆ ಹಲ್ಲೆ ನಡೆಸುತ್ತಿರುವ, ಸೆಗಣಿ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

- Advertisement -

 ಓರ್ವ ಬಾಲಕನ ತಾಯಿ ನೀಡಿದ ದೂರಿನ ಆಧಾರದಲ್ಲಿ ತೊರುರು ಟೌನ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಬಾಲಕರು ತಮ್ಮ ಸಾಕು ನಾಯಿಯನ್ನು ಹುಡುಕುತ್ತಾ ತೋಟಕ್ಕೆ ಪ್ರವೇಶಿಸಿದ್ದಾರೆ. ತೋಟದ ಕಾವಲುಗಾರ ಅದನ್ನು ಚಿತ್ರೀಕರಿಸಿ ಬೇರೆಯವರಿಗೆ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ 342, 324 ,504 ಮತ್ತು ಬಾಲ ನ್ಯಾಯ ಕಾಯ್ದೆಯ ಕಲಂ 75ರಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಕಾವಲುಗಾರರಾದ ಬನೋತ್ ಯಕ್ಕು ಮತ್ತು ಬನೋತ್ ರಾಮುಲು ಎಂಬವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ತೊರುರು ಟೌನ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎನ್. ಕರುಣಾಕರ್ ತಿಳಿಸಿದ್ದಾರೆ.

ಮಾವಿನಹಣ್ಣನ್ನು ಕದಿಯಲು ಹುಡುಗರು ಹಣ್ಣಿನ ತೋಟಕ್ಕೆ ಪ್ರವೇಶಿಸಿದ್ದಾರೆ ಎಂದು ಭಾವಿಸಿ, ಅಲ್ಲಿನ ಕಾವಲುಗಾರರು ಅವರನ್ನು ಕಟ್ಟಿಹಾಕಿದರು. ಬಳಿಕ ಬಲವಂತವಾಗಿ ಗೋವಿನ ಸಗಣಿ ತಿನ್ನಿಸಿ ಅದನ್ನು ಅವರ ದೇಹಕ್ಕೆ ಹಚ್ಚಿದ್ದಾರೆ. ಈ ದೃಶ್ಯವನ್ನು ಅವರು ಚಿತ್ರೀಕರಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಅವರು ಮಾಹಿತಿ ನೀಡಿದ್ದಾರೆ.

- Advertisement -