ದೇಗುಲ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಕಾರು ಅಪಘಾತ | ಪತ್ನಿ, ಆಪ್ತ ಸಹಾಯಕ ಸಾವು

Prasthutha|

ಕಾರವಾರ : ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೋಕರ್ಣಕ್ಕೆ ತೆರಳುತ್ತಿದ್ದಾಗ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡು ಅವರ ಪತ್ನಿ ಮತ್ತು ಆಪ್ತ ಸಹಾಯಕ ಸಾವಿಗೀಡಾಗಿದ್ದಾರೆ.

- Advertisement -

ಅಂಕೋಲಾ ತಾಲೂಕಿನ ಹೊಸಕಂಬಿ ಬಳಿ ನಡೆದ ಅಪಘಾತದಲ್ಲಿ ಸಚಿವ ಪತ್ನಿ ವಿಜಯಾ ಮತ್ತು ಆರೆಸ್ಸೆಸ್ ಪ್ರಚಾರಕ ದೀಪಕ್ ದುಬೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತೆರಳಬೇಕಾಗಿದ್ದವರು, ಕಡಿಮೆ ದೂರದ ಹಿನ್ನೆಲೆಯಲ್ಲಿಯಲ್ಲಿ ಯಲ್ಲಾಪುರದ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು. ಈ ವೇಳೆ ಬೆಂಗಾವಲು ವಾಹನ ಹಿಂದೆಯೇ ಇತ್ತು ಎನ್ನಲಾಗಿದೆ.

- Advertisement -

ಹೊಸಕಂಬಿ ಬಳಿ ರಸ್ತೆಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಹಿನ್ನೆಲೆಯಲ್ಲಿ ಕಾರಿನ ಚಕ್ರಗಳು ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಕಂದಕಕ್ಕೆ ಕಾರು ಬಿದ್ದಿದೆ. ಈ ವೇಳೆ ಮರವೊಂದಕ್ಕೆ ಕಾರು ಬಡಿದಿದೆ. ಬೆಂಗಾವಲು ವಾಹನದಲ್ಲಿ ಸಚಿವರು, ಸಚಿವರ ಪತ್ನಿ ಹಾಗೂ ಇತರರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಗಂಭೀರ ಗಾಯಗೊಂಡಿದ್ದ ಸಚಿವರ ಪತ್ನಿ ವಿಜಯಾ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಬಳಿಕ ಆರೆಸ್ಸೆಸ್ ಪ್ರಚಾರಕ ದೀಪಕ್ ದುಬೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಚಿವ ಶ್ರೀಪಾದ್ ಎಡಗೈಗೆ ಏಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗೋವಾರ ಬಾಂಬೋಲಿಗೆ ಸಾಗಿಸಲಾಗಿದೆ. ಅವರ ಆರೋಗ್ಯ ವಿಚಾರಣೆಗೆ ರಕ್ಷಣಾ ಸಚಿವರು ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗಂಭೀರ ಗಾಯಗೊಂಡಿದ್ದ ಗನ್ ಮ್ಯಾನ್ ತುಕಾರಾಮ್ ಪಾಟೀಲ್, ಚಾಲಕ ಚಂದನ್ ಹಾಗೂ ಸಾರಿಕಿರಣ ಶೆಟಿಯಾ ಎಂಬುವರನ್ನು ಅಂಕೋಲಾ ಖಾಸಗಿ ಆಸ್ಪತ್ರೆಯಿಂದ, ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀಪಾದ್ ನಾಯ್ಕ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಂಟೆ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿಯೇ ಕೆಲಹೊತ್ತು ತಂಗಿ ಧಾರ್ಮಿಕ ಕಾರ್ಯ ನೆರವೇರಿಸಿದ್ದರು. ಬಳಿಕ ಇನ್ನೊಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೋಮ-ಹವನ ನೆರವೇರಿದ್ದರು. ಈಶ್ವರ ದೇವಾಲಯಕ್ಕೂ ತೆರಳಿ ಪೂಜೆ ನೆರವೇರಿಸಿದ್ದರು. ಹೀಗೆ ಯಲ್ಲಾಪುರದಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸ್ ಬರುತ್ತಾ ಗೋಕರ್ಣ ಮಹಾಬಲೇಶ್ವರ ದರ್ಶನ ಪಡೆದು ಗೋವಾಕ್ಕೆ ಹೋದರಾಯಿತು ಎಂದು ಗೋಕರ್ಣಕ್ಕೆ ಹೋಗುತ್ತಿರುವ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.  

Join Whatsapp