ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮೃದ್ಧ ದೇಶ ನಿರ್ಮಾಣಕ್ಕೆ ಮಕ್ಕಳಿಗೆ ಪ್ರಿಯಾಂಕ್ ಖರ್ಗೆ ಕರೆ

Prasthutha|

►ದೊಡ್ಡಜಾಲ ಗ್ರಾಮದಲ್ಲಿ ಗ್ರಂಥಪಾಲಕರ ದಿನಾಚರಣೆ

- Advertisement -

ಬೆಂಗಳೂರು: ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ದೇಶ ನಿರ್ಮಾಣ ಮಾಡಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ  ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.

- Advertisement -

ಯಾವ ಸಮಾಜದಲ್ಲಿ ಪ್ರಬುದ್ಧತೆ ಇರುತ್ತದೆ, ಆ ಸಮಾಜದಲ್ಲಿ ಪ್ರಗತಿಪರವಾದ ಆಲೋಚನೆಗಳಿರುತ್ತವೆ, ಎಲ್ಲಿ ಪ್ರಗತಿಪರ ಆಲೋಚನೆಗಳಿರುತ್ತವೆಯೋ ಅಂತಹ ಕಡೆ ಮಾತ್ರ ನಾವು ಸಮೃದ್ಧಿಯನ್ನು ಕಾಣಬಹುದಾಗಿದೆ ಎಂದು ತಿಳಿಸಿದ ಸಚಿವರು ‘ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ’ ಎಂಬ ನಲ್ಸನ್ ಮಂಡೆಲಾ ಅವರ ಅವರ ನುಡಿಯನ್ನು ನೆನಪು ಮಾಡಿಕೊಟ್ಟು, ಮಕ್ಕಳು ಹೆಚ್ಚು ಹೆಚ್ಚು ಓದಿ ಉನ್ನತ ಹುದ್ದೆಗಳಿಗೆ ಹೋಗಬೇಕೆಂದು ಆಶಿಸಿದರು. ಉನ್ನತ ಅಧಿಕಾರಿಗಳು ಆಗಿಂದಾಗ್ಗೆ ಗ್ರಾಮೀಣ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕಲಿಯುವ ಮಕ್ಕಳಿಗೆ ಮಾದರಿಯಾಗಬೇಕೆಂದು ಸಲಹೆ ಮಾಡಿದರು.

ದೊಡ್ಡಜಾಲ ಗ್ರಾಮ ಪಂಚಾಯತಿ ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ, ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕೃಷ್ಣ ಭೈರೇಗೌಡರ ಈ ಆಶಯ ಕಾರ್ಯಗತವಾಗಲಿ ಎಂದು ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದರು.

ದೊಡ್ಡಜಾಲ ಶಾಲೆಯ ಮಕ್ಕಳು ಕ್ರೀಡಾ ಸಾಮಗ್ರಿಗಳ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಅವುಗಳನ್ನು ತಾವು ವೈಯಕ್ತಿಕವಾಗಿ ಕೊಂಡು ಶಾಲೆಗೆ ಕೊಡುಗೆ ನಿಡುವುದಾಗಿ ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದರು. ದೊಡ್ಡಜಾಲ ಗ್ರಂಥಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹೊಸದಾಗಿ ಎರಡು ಮಹಡಿ ನಿರ್ಮಿಸಲು 25 ಲಕ್ಷ ರೂ. ಒದಗಿಸುವುದಾಗಿ ಸಚಿವರು ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದ ಗ್ರಾಮೀಣಾಭಿವೃದ್ಧಿ ಸಚಿವರು ಗ್ರಂಥಾಲಯದಲ್ಲಿ ಬಳಸುವ ಸಲುವಾಗಿ ಶಿಕ್ಷಣ ಪಿಡಿಯಾ, ಶೈಕ್ಷಣಿಕ ಪುಸ್ತಕಗಳು, ಕಥೆಗಳು ಹಾಗೂ ಕೌಶಲ್ಯಾಧಾರಿತ ವಿಡಿಯೊಗಳು ಹಾಗೂ ಟ್ಯಾಬ್ ಹಸ್ತಾಂತರಿಸಿದರು. ಓದುವ ಬೆಳಕು ಪುಸ್ತಕಗಳ ಪ್ರಥಮ ಕಿಟ್ ವಿತರಿಸಿದರು. ಆರಂಭದಲ್ಲಿ ಗ್ರಂಥಾಲಯ ಪಿತಾಮಹ ಎಸ್.ವಿ.ರಂಗನಾಥನ್ ಅವರ ಭಾವಚಿತ್ರಕ್ಕೆ ಸಚಿವರು ಪುಷ್ಪಾರ್ಚನೆ ಮಾಡಿದರು.

ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ದೊಡ್ಡಜಾಲ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ದೊಡ್ಡಜಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಆರ್. ಭೈರೇಗೌಡ, ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಂಗಪ್ಪ, ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಸುವರ್ಣಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Join Whatsapp