ವಿದೇಶದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸಚಿವ ಪ್ರಹ್ಲಾದ್ ಜೋಷಿ ಅವಹೇಳನಕಾರಿ ಹೇಳಿಕೆ: ಡಿ.ಕೆ. ಶಿವಕುಮಾರ್ ಗರಂ

Prasthutha|

ಬೆಂಗಳೂರು: ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಇಂದು ಧಕ್ಕೆಯಾಗಿದೆ. ಒಬ್ಬ ವಿದ್ಯಾರ್ಥಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಆದರೆ ನಮ್ಮ ಕೇಂದ್ರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ‘ಈ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದು ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂದು ಪೋಷಕರು ಆಸೆ ಇಟ್ಟುಕೊಂಡಿರುತ್ತಾರೆ. ಇಲ್ಲಿ 30 ಲಕ್ಷ, 1 ಕೋಟಿ, 2 ಕೋಟಿ ಕೊಟ್ಟು ಶಿಕ್ಷಣ ಕೊಡಿಸಲು ಅವರಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆ ಆರ್ಥಿಕ ಶಕ್ತಿ ಇರುವುದಿಲ್ಲ. ಹೀಗಾಗಿ ಬೇರೆ ರಾಷ್ಟ್ರಗಳಲ್ಲಿ ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆಯಲು ಹೋಗಿರುತ್ತಾರೆ ಎಂದು ಹೇಳಿದರು.

ಆ ಸಚಿವರು ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ದೇಶದ ಪ್ರತಿಭಾವಂತ ಯುವ ಸಮೂಹ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದೆ. ಅಲ್ಲದೆ ಪ್ರತಿಷ್ಠಿತ ಐನೂರು ಕಂಪನಿಗಳಲ್ಲಿ ಬಹುತೇಕವನ್ನು ಅವರೇ ಮುನ್ನಡೆಸುತ್ತಿದ್ದಾರೆ. ಅಮೆರಿಕ, ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ಸಾವಿರಾರು ಮಂದಿ ನಮ್ಮ ದೇಶ ಹಾಗೂ ರಾಜ್ಯಕ್ಕೆ ಬಂದು ಓದುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆ ದುಬಾರಿ ಎಂದು ಹಲವಾರು ಕಡೆಗಳಿಂದ ನಮ್ಮ ಜಯದೇವ ಹಾಗೂ ಇತರೆ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು

- Advertisement -

ಉಕ್ರೇನ್ ನಲ್ಲಿ ನಮ್ಮ ವಿದ್ಯಾರ್ಥಿಗಳ ಪರದಾಟ  ಮುಂದುವರಿದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ ಕೂಡಲೇ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಗುರುವಾರದ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಇಡೀ ರಾಜ್ಯದ ಮೂಲೆ, ಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಮೇಕ್ರಿ ಸರ್ಕಲ್ ನಿಂದ ಯಾತ್ರೆ ಆರಂಭವಾಗಲಿದೆ ಹಾಗೂ ಈ ಪಾದಯಾತ್ರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಅಂತ್ಯವಾಗಲಿದೆ.

ಸರ್ವಧರ್ಮ, ಜನಾಂಗ, ಪಕ್ಷಗಳಿಗೆ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಈ ದೊಡ್ಡ ಜನಸಂಖ್ಯೆಯಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರವಿಲ್ಲ. ಎಲ್ಲ ವರ್ಗಕ್ಕೆ ಸೇರಿದ ಕಾರ್ಮಿಕರು, ರೈತರು, ನಾಗರೀಕರು ಇದ್ದಾರೆ. ಬಿಜೆಪಿ ಹಾಗೂ ದಳದ ಜತೆ ಗುರುತಿಸಿಕೊಳ್ಳಲಾಗದವರೂ ಕೂಡ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಅವರಿಗೆ ಜನ ಸೇರಿಸುವುದು ಕಷ್ಟವಲ್ಲ. ಆದರೆ ನಾನು ನಿಮ್ಮ ಮೂಲಕ ಪಾದಯಾತ್ರೆಗೆ ರಾಜ್ಯದ ಎಲ್ಲ ಕಾರ್ಯಕರ್ತರು ಈ ಪಾದಯಾತ್ರೆ ನೋಡುವ ಭಾಗ್ಯ, ಅನುಭವ ಪಡೆಯಲು ಅವರನ್ನು ಆಹ್ವಾನಿಸುತ್ತಿದ್ದೇನೆ ಎಂದು ತಿಳಿಸಿದರು

Join Whatsapp