ಪ್ರಮೋದ್ ಮಧ್ವರಾಜ್ ಭೇಟಿಯಾದ ಸಚಿವ ಮಂಕಾಳ ವೈದ್ಯ : ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ

Prasthutha|

ಉಡುಪಿ: ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವ ಮಾಜಿ
ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿ ಮಾಡಿರುವ ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ನಡೆಯ ವಿರುದ್ಧ ಉಡುಪಿ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

- Advertisement -

ಉಡುಪಿ ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದ ಸಚಿವ ಮಂಕಾಳ ವೈದ್ಯ, ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆಯಲ್ಲಿರುವ ಮನೆಗೆ ಭೇಟಿ ನೀಡಿ ಸನ್ಮಾನವನ್ನು ಸ್ವೀಕರಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಮೋದ್ ಮಧ್ವರಾಜ್, “ಮೀನುಗಾರಿಕಾ ಸಚಿವರಾಗಿರುವ ಶ್ರೀ ಮಾಂಕಳ ವೈದ್ಯ ರವರು ಉಭಯ ಕುಶಲೋಪರಿ ವಿಚಾರಿಸಲು ನಮ್ಮ ಅಮ್ಮುಂಜೆಯ ಮನೆಗೆ ಭೇಟಿ ನೀಡಿದರು, ಅವರನ್ನು ಗೌರವದಿಂದ ಸ್ವಾಗತಿಸಿ, ಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ಮತ್ತು ಒಳನಾಡು ಮೀನುಗಾರಿಕೆ ನಡೆಸುವ ಮೀನುಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ, ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಗಮನಹರಿಸುವಂತೆ ಚರ್ಚೆ ನಡೆಸಲಾಯಿತು” ಎಂದು ತಿಳಿಸಿದ್ದರು.

- Advertisement -

ಸಚಿವರ ಭೇಟಿಯ ಕುರಿತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ತೀವ್ರ
ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಈ ಮನಸ್ಥಿತಿ ಬದಲಾಗದಿದ್ದರೆ ಉಡುಪಿ ಜಿಲ್ಲೆಯಲ್ಲಿ ಇನ್ನು 25ವರ್ಷ ಕಳೆದರೂ ಕಾಂಗ್ರೆಸ್ ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಚುನಾವಣೆ ವೇಳೆ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಸೋಲುತ್ತದೆ. ಸಿದ್ದರಾಮಯ್ಯ ಗಾಂಧಿ ಕುಟುಂಬದ ಕೈಗೊಂಬೆ, ಡಿ.ಕೆ.ಶಿವಕುಮಾರ್ ಭ್ರಷ್ಟ ರಾಜಕಾರಣಿ ಮುಂತಾದ ಹತ್ತು ಹಲವು ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ಪಕ್ಷದ ಸೋಲಿಗೆ ಶ್ರಮಿಸಿದವರು. ಪ್ರಮೋದ್ ಮಧ್ವರಾಜ್ ಮನೆಗೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ, ಅವರ ಮನೆಯಲ್ಲಿ ಸನ್ಮಾನ ಸ್ವೀಕಾರ ಮಾಡಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ ಉಡುಪಿಯ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ಅವಮಾನ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನೀಡಿದ ಆಗೌರವ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp