ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಜನಪ್ರತಿನಿಧಿಗಳಾಗಲು ಅನರ್ಹರು: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಉತ್ತರದಾಯಿತ್ವ ಇರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಾಗಿದೆ. ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಈ ಸ್ಥಾನದಲ್ಲಿ, ಈ ಹುದ್ದೆಯಲ್ಲಿರಲು ಅನರ್ಹರು ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.‌

- Advertisement -

ಇನ್​ಸೈಟ್ ಐಎಎಸ್ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್​ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಹೊಣೆಗಾರಿಕೆ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿರುತ್ತದೆ ಎಂದು ಹೇಳಿದರು.

ಸಮಾಜದಲ್ಲಿರುವ ಅಸಮಾನತೆಯಿಂದಾಗಿ ಬಹುಸಂಖ್ಯಾತ ಸಮುದಾಯ ಅಕ್ಷರ ಕಲಿಕೆಯಿಂದ ವಂಚಿತವಾಗಿದೆ. ಈ ಅಸಮಾನತೆಯನ್ನು ಅಳಿಸಲು ಸಾಧ್ಯವಾಗದಿದ್ದರೆ, ಆ ದಿಕ್ಕಿನಲ್ಲಿ ಶ್ರಮಿಸದಿದ್ದರೆ ನಾವು ಜನಪ್ರತಿನಿಧಿಗಳಾಗಿ, ಐಎಎಸ್-ಕೆಎಎಸ್ ಅಧಿಕಾರಿಗಳಾಗಿ ಏನು ಪ್ರಯೋಜನ ಎಂದು ಸಿಎಂ ಪ್ರಶ್ನಿಸಿದರು.

- Advertisement -

ಅಸಮಾನತೆ, ತಾರತಮ್ಯ ಅಳಿಸಲು ಯತ್ನಿಸದೇ ಹೋದರೆ ಈ ದೇಶದ ಜನರೇ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಎಚ್ಚರಿಕೆಯ ಮಾತನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ಎಚ್ಚರಿಕೆಯ ಮಾತನ್ನು ನೆನಪಿನಲ್ಲಿಟ್ಟುಕೊಂಡು ಅಸಮಾನತೆ, ತಾರತಮ್ಯವನ್ನು ಅಳಿಸಬೇಕು. ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರುತ್ತದೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್​ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ ಎಂದರು.

ಹೀಗಾಗಿ ಹಸಿವು ಗೊತ್ತಿರುವ ಹಳ್ಳಿ ಮಕ್ಕಳನ್ನು ಐಎಎಸ್​ ಅಧಿಕಾರಿಗಳನ್ನಾಗಿ ಮಾಡಿ ಎಂದು ಇನ್​ಸೈಟ್ ಸಂಸ್ಥೆಗೆ ಕಿವಿಮಾತು ಹೇಳಿದರು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಇನ್​ಸೈಟ್ ಸಂಸ್ಥೆಯ ನಿರ್ದೇಶಕರಾದ ವಿನಯ್ ಕುಮಾರ್ ಹಾಗೂ ಮಧುಕರ್ ನಾಗಣ್ಣ ಅವರು ಉಪಸ್ಥಿತರಿದ್ದು ಯುಪಿಎಸ್​ಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

Join Whatsapp