ಶ್ರೀನಗರ । ಮಗನ ಮುಂದೆಯೇ ಗುಂಡು ಹಾರಿಸಿ ತಾಯಿಯ ಹತ್ಯೆ : ಭದ್ರತಾ ಪಡೆಗಳ ವಿರುದ್ಧ ಆರೋಪ

Prasthutha|

ಶ್ರೀನಗರದ ಬಟಾಮಲು ಪ್ರದೇಶದಲ್ಲಿ ಭದ್ರತಾ ಪಡೆಗಳು ಸ್ವಂತ ಮಗನ ಮುಂದೆಯೇ ಮಹಿಳೆಯೊಬ್ಬಳನ್ನು ಗುಂಡಿಟ್ಟು ಹತ್ಯೆ ಮಾಡಿದೆ. ಈ ಕುರಿತು ಮಹಿಳೆಯ ಕುಟುಂಬಿಕರು ಆರೋಪಿಸಿದ್ದು, ಪ್ರದೇಶದಲ್ಲಿ ಉದ್ರಿಕ್ತ ಸ್ಥಳೀಯರು ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.. ಭದ್ರತಾ ಪಡೆಗಳು ಪ್ರತಿಭಟನೆಕಾರರ ಮೇಲೆ ಅಶ್ರುವಾಯು ಸಿಡಿಸಿದ್ದು, ಪ್ರದೇಶದಲ್ಲಿ ಇನ್ನೂ ಉದ್ರಿಕ್ತ ವಾತಾವರಣ  ಇದೆ ಎಂದು ವರದಿಗಳು ತಿಳಿಸಿದೆ. ಹತ್ಯೆಯಾದ ಮಹಿಳೆಯನ್ನು 45 ವರ್ಷದ ಕೌನ್ಸರ್ ಸೋಫಿ ಎಂದು ಗುರುತಿಸಲಾಗಿದೆ.

- Advertisement -

ಘಟನೆಯ ಕುರಿತು ಕೌನ್ಸರ್ ಸೋಫಿಯ ಮಗ ಆಕಿಬ್ ಸೋಫಿ ಹೇಳುವಂತೆ ಬೆಳಗ್ಗೆ 3.30 ರ ವೇಳೆಯಲ್ಲಿ ನಾನು ಮತ್ತು ತಾಯಿ ಎಂದಿನಂತೆ ಬಾರಪಾಥರ್ ಪ್ರದೇಶದಲ್ಲಿರುವ ತಮ್ಮ ಕಂದೂರ್ ವಾನ್ ಬೇಕರಿ ತೆರೆಯಲು ತೆರಳುತ್ತಿದ್ದರು. ಹಿಂದಿನ ದಿನ ರಾತ್ರಿ ಆ ಪ್ರದೇಶದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.  ಕೌನ್ಸರ್ ಸೋಫಿಯ ಮಗ ತಮ್ಮ ವಾಹನದಲ್ಲಿ ತಾಯಿಯೊಂದಿಗೆ ತೆರಳುತ್ತಿದ್ದಾಗ ಪೊಲೀಸ್ ಚೌಕಿಯ ಮುಂದೆ ವಾಹನ ತಿರುಗಿಸಿದಾಗ ತಮ್ಮತ್ತ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ತಾಯಿ ಸ್ಥಳದಲ್ಲೇ  ಪ್ರಾಣ ಕಳೆದುಕೊಂಡರು ಎಂದು ಮಗ ಆಕಿಬ್ ಹೇಳಿದ್ದಾರೆ.  ತಾಯಿಯ ಮೇಲೆ ಗುಂಡು ಹಾರಿಸಿದ ಭದ್ರತಾ ಪಡೆಗಳೊಂದಿಗೆ ಮಗ ಆಕಿಬ್ “ಯಾಕಾಗಿ ನೀವು ನನ್ನ ತಾಯಿಯನ್ನು ಕೊಂದಿರಿ” ಎಂದು ಕೇಳಿದಾಗ ಪೊಲೀಸರು ಯಾವುದೇ ಉತ್ತರ ನೀಡಲಿಲ್ಲ ಎಂದು ಮಗ ಆಕಿಬ್ ಹೇಳುತ್ತಾರೆ.

“ರಾತ್ರಿ 2 ಗಂಟೆಗಿಂತ ಮೊದಲು ಅಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ಕೇಳಿ ಬಂದಿತ್ತು. ಆ ನಂತರ ಭದ್ರತಾ ಪಡೆಗಳು ಹುಡುಕಾಟ ನಡೆಸಿದ್ದವು. ಆದರೆ ಕೌನ್ಸರ್ ಸೋಫಿಯ ಹತ್ಯೆ ನಡೆದಿದ್ದು ಬೆಳಗ್ಗೆ 3.45 ಕ್ಕೆ. ಆ ವೇಳೆ ಅಲ್ಲಿ ಯಾವುದೇ ಉಗ್ರರ ಚಲನವಲನ ಇರಲಿಲ್ಲ” ಎಂದು ಸ್ಥಳೀಯರು ಹೇಳುತ್ತಾರೆ.  ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಪೊಲೀಸರು, ಉಗ್ರರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಕೌನ್ಸರ್ ಸೋಫಿ ಮತ್ತು ಅರೆಮಿಲಿಟರಿ ಸೇನಾ ಪಡೆಗಳ ಸದಸ್ಯರೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಮಹಿಳೆ ನಂತರ ಮೃತಪಟ್ಟರು. ಆ ಬಳಿಕ ನಾವು ಉಗ್ರರೊಂದಿಗೆ ಹೋರಾಡಿ ಮೂವರು ಉಗ್ರರನ್ನು ಕೊಂದು ಹಾಕಿದ್ದೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

Join Whatsapp