ಕಾಂಗ್ರೆಸ್ ಸದಸ್ಯರು ಅಹಿಂಸೆ ಮೂಲಕ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಯಾರೂ ಏನೇ ರಾಜಕೀಯ ಮಾಡಿದರು ಕೂಡ ಮಹಾತ್ಮಾ ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ಇಡೀ ವಿಶ್ವವೇ ಒಪ್ಪಿದೆ. ಅವರು ತಮ್ಮ ಕೊನೆಯುಸಿರೆಳೆಯುವಾಗ ‘ಹೇ ರಾಮ್’ ಎಂದರು. ‘ರಘುಪತಿ ರಾಘವ ರಾಜಾರಾಂ’ ಎಂಬ ಹಾಡಿನ ಸಾಲುಗಳಲ್ಲಿ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾರ್ಗದರ್ಶನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ , ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಈ ಕಾಂಗ್ರೆಸ್ ಧ್ವಜದಲ್ಲಿ ಗಾಂಧೀಜಿ ಅವರ ಚರಕದ ಗುರುತು ಅಡಗಿದೆ. ಈ ಕಾಂಗ್ರೆಸ್ ಬಾವುಟ ಹಿಡಿಯುವ ನಿಮಗೆ ಮಾತ್ರ ಗಾಂಧೀಜಿ ಅವರ ಜತೆ ಭಾವನಾತ್ಮಕ ಸಂಬಂಧ ಹೊಂದುವ ಅವಕಾಶವಿದೆ. ಈ ಭಾಗ್ಯ ನಿಮಗೆ ಮಾತ್ರವೇ ಹೊರತು ಬೇರೆಯವರಿಗೆ ಸಿಗುವುದಿಲ್ಲ. ನಾವು, ನೀವೂಗಳು ಅವರನ್ನು ನೋಡಿಲ್ಲದೆ ಇರಬಹುದು. ಆದರೆ ಅವರ ಆಚಾರ, ವಿಚಾರ, ತತ್ವಗಳನ್ನು ಕಂಡಿದ್ದೇವೆ ಹಾಗೂ ಪಾಲಿಸುತ್ತಿದ್ದೇವೆ ಎಂದರು.

ನಮ್ಮ ನಾಯಕರ ತ್ಯಾಗ ಬಲಿದಾನದ ಇತಿಹಾಸ ಬೇರೆ ಪಕ್ಷದವರಿಗೆ ಇಲ್ಲ. ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನದಿಂದ ಅವರು ತಮ್ಮ ಕೊನೆಯುಸಿರು ಎಳೆಯುವ ದಿನದವರೆಗೂ ಪ್ರತಿ ನಿತ್ಯ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದರು. ಅವರ ಚರಕವು ನಮಗೆ ಒಂದು ಸಂದೇಶ ನೀಡುತ್ತದೆ. ವಿದೇಶದವರ ಮೇಲೆ ಅವಲಂಬನೆ ಬೇಡ. ನಮ್ಮ ಬಟ್ಟೆಯನ್ನು ನಾವೇ ತಯಾರಿಸಿಕೊಳ್ಳೋಣ ಎಂಬ ಸ್ವಂತ ಉದ್ಯೋಗ, ಸ್ವಾವಲಂಬನೆಯ ಸಂಕೇತ ಅದಾಗಿದೆ ಎಂದು ಡಿಕೆಶಿ ಹೇಳಿದರು.
ಪ್ರತಿ ಹಳ್ಳಿಯಲ್ಲಿ ಪಂಚಾಯ್ತಿ ಇರಬೇಕು. ಸಹಕಾರ ಸಂಘ ಇರಬೇಕು ಎಂಬ ಅವರ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿವೆ. ಬ್ಯಾಂಕ್ ಗಳು ರಾಷ್ಟೀಕರಣವಾದರೂ ಸಹಕಾರ ತತ್ವದ ಮೇಲೆ ಉಳಿದುಕೊಂಡ ಸಂಸ್ಥೆಗಳು ಸಮಾಜವನ್ನು ಸಮತೋಲನದಲ್ಲಿಡಲು ನೆರವಾಗಿವೆ.

- Advertisement -

My religion is based on thruth and non violence ಅಂದರೆ, ‘ಸತ್ಯ ಹಾಗೂ ಅಹಿಂಸೆ ಆಧಾರದ ಮೇಲೆ ನನ್ನ ಧರ್ಮ ನಿಂತಿದೆ’ ಎಂದು ಗಾಂಧಿ ಅವರು ಹೇಳಿದ್ದರು. ಅವರ ಸತ್ಯ ಹಾಗೂ ಅಹಿಂಸೆಯನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ.
ನಾವು ಇತ್ತೀಚೆಗೆ ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಎಂಬ ಪಾದಯಾತ್ರೆ ಮಾಡಿದೆವು. ನಮಗೆ ಪಾದಯಾತ್ರೆ, ಹೋರಾಟವನ್ನು ಹೇಳಿಕೊಟ್ಟವರು ಯಾರು? ಅದೇ ಮಹಾತ್ಮ ಗಾಂಧೀಜಿ. ಕಾಂಗ್ರೆಸಿಗರು ಮಾತ್ರ ಇದರ ಬಗ್ಗೆ ಯೋಚಿಸಲು ಸಾಧ್ಯ. ನಾವು ಲಾಠಿ, ಬಂದೂಕು ಹಿಡಿದುಕೊಂಡು ಬೇರೆಯವರ ಮೇಲೆ ಯುದ್ಧ ಮಾಡಲು ಹೋಗಿರಲಿಲ್ಲ. ಗಾಂಧೀಜಿ ಅವರು ಹೇಳಿಕೊಟ್ಟ ನಡಿಗೆ, ಮಾರ್ಗದರ್ಶನವನ್ನು ಪಾಲನೆ ಮಾಡುತ್ತಿದ್ದೇವೆ. ಆದರೆ ಇದನ್ನು ಕೆಲವರು ಒಪ್ಪಲು ತಯಾರಿಲ್ಲ. ನಮ್ಮ ಹೋರಾಟ ಹಿಂಸೆ ಮಾರ್ಗದಲ್ಲಿ ಹೋಗಬಾರದು ಎಂಬ ಕಾರಣಕ್ಕೆ ನಾವು ಗಾಂಧೀಜಿ ಅವರ ಪ್ರತಿಮೆ ಮುಂದೆ ಹೋರಾಟ ಮಾಡುತ್ತೇವೆ ಎಂದರು.

ಈ ದೇಶಕ್ಕೆ, ಪ್ರಪಂಚಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ. ನಾವು ಅವರ ಮಾರ್ಗರ್ಶನ ಒಪ್ಪಿದ್ದೇವೆ. ಕಾಂಗ್ರೆಸಿಗರಾಗಿ ಅವರ ಹಾಗೂ ಅವರ ಜತೆಗಿನ ಗಣ್ಯರ ನಾಯಕತ್ವವೇ ನಮಗಿರುವ ಶಕ್ತಿ. ಅವರ ಆದರ್ಶ, ಮಾರ್ಗದರ್ಶನ, ಆಲೋಚನೆ, ಸತ್ಯ ಮತ್ತು ಕಾಯಕದ ಮೇಲೆ ನಂಬಿಕೆ ಇಟ್ಟು ನಾವು ಮುನ್ನಡೆಯಬೇಕಿದೆ.

ಮತ್ತೊಂದು ಕಡೆ ಗಾಂಧೀಜಿ ಅವರು, Dear god if I hurt others, grant me the strength to apologize, If somebody hurts me grant me the strength to forgive ಎಂದು ಹೇಳಿದ್ದಾರೆ. ‘ದೇವರೇ, ನಾನು ಯಾರಿಗಾದರೂ ನೋವು ಮಾಡಿದ್ದರೆ, ನಾನು ಅವರಿಗೆ ಕ್ಷಮೆ ಕೋರುವ ಶಕ್ತಿ ಕೊಡು, ಬೇರೆಯವರು ನನಗೆ ನೋಯಿಸಿದರೆ ಅವರನ್ನು ಕ್ಷಮಿಸುವ ಶಕ್ತಿ ನೀಡು’ ಎಂದರ್ಥ.

ಬೇರೆಯವರ ವಿಶ್ವಾಸ ಹೇಗೆ ಗಳಿಸಬೇಕು ಎಂಬುದಕ್ಕೆ ಗಾಂಧಿಜೀ ಅವರು ‘ನೀನು ನಿನ್ನನ್ನು ಗೆಲ್ಲಬೇಕಾದರೆ, ನಿನ್ನ ಮಿದುಳು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯ ಪ್ರಯೋಗಿಸು’ ಎಂದು ಹೇಳಿದ್ದಾರೆ. ಇದು ಗಾಂಧೀಜಿ ಅವರು ನಮಗೆ ಕೊಟ್ಟ ಮಾರ್ಗದರ್ಶನ. ನಾವು ಕೂಡ ಇದನ್ನು ಅಳವಡಿಸಿಕೊಂಡು ನಮ್ಮ ಸ್ನೇಹಿತರು, ಕಾರ್ಯಕರ್ತರನ್ನು, ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕು. ಇದು ನಮ್ಮ ಪಕ್ಷದ ಮೂಲಮಂತ್ರವಾಗಬೇಕು ಎಂದರು.

ಈಗ ವಿವಿಧ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ ಈಗ ತುರ್ತುಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ನಾವು ಅಹಿಂಸೆ ಮಾರ್ಗದಲ್ಲಿ ಹೋರಾಡಬೇಕು.

ಈ ದೇಶದ ರೈತರು 400 ಸಂಸತ್ ಸದಸ್ಯರಿರುವ ಬಲಿಷ್ಠ ಸರ್ಕಾರದ ವಿರುದ್ಧ ಬೀದಿಗಿಳಿದು ಒಂದು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ್ದಾರೆ. ರೈತರು ಗಾಂಧೀಜಿ ಅವರ ತತ್ವದಂತೆ ಅಹಿಂಸೆ ಮಾರ್ಗದ ಮೂಲಕ ಸತ್ಯಾಗ್ರಹ ಮಾಡಿ ಪ್ರಧಾನಿಗಳು ಕರಾಳ ಕಾಯ್ದೆಗಳನ್ನು ಹಿಂಪಡೆದು ಕೈಮುಗಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ.

ಅಧಿಕಾರ, ಮತ, ದರ್ಪ ಇದ್ಯಾವುದೂ ಹೋರಾಟದ ಮುಂದೆ ಶಾಶ್ವತವಲ್ಲ. ಹೀಗಾಗಿ ನಾವು ನೀವೆಲ್ಲ ಅವರ ಮಾರ್ಗದರ್ಶನ ಅಳವಡಿಸಿಕೊಂಡು ದೇಶದ ಐಕ್ಯತೆ, ಸಮಗ್ರತೆ ಕಾಯ್ದುಕೊಂಡು ದೇಶವನ್ನು ಅಭಿವೃದ್ಧಿಶೀಲ ಮಾಡಬೇಕಿದೆ. ಈ ದೇಶದಲ್ಲಿ ಅನೇಕ ನ್ಯಾಯಾಲಯಗಳಿವೆ. ಎಲ್ಲದಕ್ಕಿಂತ ಶ್ರೇಷ್ಠವಾದ ನ್ಯಾಯಾಲಯ ನಿಮ್ಮೊಳಗಿನ ಆತ್ಮಸಾಕ್ಷಿ. ನಮ್ಮ ಆತ್ಮಸಾಕ್ಷಿ ಒಪ್ಪಿದರೆ ಅದಕ್ಕಿಂತ ದೊಡ್ಡ ತೀರ್ಪಿಲ್ಲ. ನಮ್ಮ ವಿಚಾರ, ನಡೆಗಳು ನಮ್ಮ ಆತ್ಮಸಾಕ್ಷಿಗೆ ಮೆಚ್ಚುಗೆಯಾಗಬೇಕು. ಕಾಂಗ್ರೆಸ್ ನ ಎಲ್ಲ ಸದಸ್ಯರು ಅಹಿಂಸೆ ಮೂಲಕ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಈ ದೇಶ, ಪ್ರಜಾಪ್ರಭುತ್ವ, ನಮ್ಮ ನಾಯಕರು ಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಹೇಳಿದರು.

ನಮ್ಮ ನಾಯಕರ ತ್ಯಾಗ, ಬಲಿದಾನ ನಮ್ಮ ಶಕ್ತಿ. ಅಹಿಂಸೆ, ತ್ಯಾಗ, ಬಲಿದಾನ ಇವೆಲ್ಲವೂ ಒಂದೊಂದು ಅಸ್ತ್ರ. ಈ ಪಕ್ಷದ ಸದಸ್ಯರಾಗಿರುವುದು ನಮ್ಮ ಭಾಗ್ಯ. ಇಂದು ಗಾಂಧೀಜಿ ಅವರನ್ನು ಕಳೆದುಕೊಂಡು ಹುತಾತ್ಮರ ದಿನ ಆಚರಿಸುತ್ತಿದ್ದೇವೆ. ಇಡೀ ದೇಶದೆಲ್ಲೆಡೆ ಮೌನಾಚಾರಣೆ ಮಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿಕೊಂಡು ಬಂದಿದ್ದೇವೆ. ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಕಾಂಗ್ರೆಸ್ ಸದಸ್ಯರಾಗಿ ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಶಿವಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Join Whatsapp