ಶ್ರೀನಗರ: ಉತ್ತರ ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ತಡೆಯಲು ತನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.
ಈ ಮಧ್ಯೆ ಪೊಲೀಸರು ಮುಫ್ತಿ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ ಮತ್ತು ಅವರು ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಸ್ವತಂತ್ರರು ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕಾಶ್ಮೀರದ ಶ್ರೀನಗರದಿಂದ 54 ಕಿ.ಮೀ ದೂರದಲ್ಲಿರುವ ಬಾರಾಮುಲ್ಲಾಗೆ ಪ್ರಯಾಣಿಸುತ್ತಿದ್ದು, ಅಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದರಿಂದ ಶ್ರೀನಗರದಿಂದ 27 ಕಿ.ಮೀ ದೂರದಲ್ಲಿರುವ ಪಟ್ಟನ್’ನಲ್ಲಿ ಕಾರ್ಯಕರ್ತರೊಬ್ಬರ ಮದುವೆಯಲ್ಲಿ ಭಾಗವಹಿಸಲು ಕೂಡ ತಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ಮುಫ್ತಿ ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯೋರ್ವರ ಮೂಲಭೂತ ಹಕ್ಕುಗಳನ್ನು ಸುಲಭವಾಗಿ ತಡೆಯಬಹುದಾದರೆ, ಸಾಮಾನ್ಯರ ದುಃಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಮುಫ್ತಿ ಟ್ವೀಟ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗೃಹಸಚಿವ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಮಾತ್ರವಲ್ಲ ತಾನು ಗೃಹಬಂಧನದಲ್ಲಿರುವ ಮನೆಯ ಮುಖ್ಯ ಗೇಟ್’ಗೆ ಬೀಗ ಹಾಕಿರುವ ಚಿತ್ರಗಳನ್ನು ಮುಫ್ತಿ ಅವರು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ 40 ನಿಮಿಷದ ಬಳಿಕ ಪ್ರತಿಕ್ರಿಯಿಸಿದ ಕಾಶ್ಮೀರ ಪೊಲೀಸರು, ಮುಫ್ತಿಯವರ ಪ್ರಯಾಣಕ್ಕೆ ನಮ್ಮ ಕಡೆಯಿಂದ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಗೃಹಬಂಧನ ವಿಧಿಸುವುದಾದರೆ ಮನೆಯ ಗೇಟ್’ನ ಹೊರಗಿನಿಂದ ಬೀಗ ಹಾಕಬೇಕು. ಆದರೆ ಇಲ್ಲಿ ಮನೆಯ ಗೇಟ್’ನ ಒಳಗಿನಿಂದ ಬೀಗ ಹಾಕಲಾಗಿದೆ. ಈ ಕುರಿತ ಎರಡೂ ಚಿತ್ರಗಳನ್ನು ಪೊಲೀಸರು ಟ್ವೀಟ್ ಮಾಡಿದ್ದಾರೆ.