ಪ್ರಧಾನಿ ಮೋದಿ ಒಬ್ಬ ‘ದುರಹಂಕಾರಿ’ ಎಂದ ಮೇಘಾಲಯ ಗವರ್ನರ್ ಸತ್ಯಪಾಲ್ ಮಲಿಕ್

Prasthutha|

ದೆಹಲಿ: ಪ್ರಧಾನಿ ಮೋದಿ ಒಬ್ಬ ದುರಹಂಕಾರಿ ಎಂದು ಮೇಘಾಲಯ ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.

- Advertisement -

ಹರಿಯಾಣದ ಚಕ್ರಿದಾದ್ರಿ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಅವರು ಅಹಂಕಾರದಿಂದ ವರ್ತಿಸಿದರು ಎಂದು ಹೇಳಿದ್ದಾರೆ. ನಾನು ರೈತರ ಪ್ರತಿಭಟನೆ ಕುರಿತು ಪ್ರಧಾನಿಯವರನ್ನು ಭೇಟಿಯಾಗಿ ಮಾತನಾಡಲು ತೆರಳಿದ್ದೆ. ಭೇಟಿಯಾದ ಐದೇ ನಿಮಿಷಕ್ಕೆ ನಮ್ಮಿಬ್ಬರ ನಡುವೆ ಜಗಳವಾಯಿತು. ಪ್ರಧಾನಿ ಮೋದಿ ಸೊಕ್ಕಿನ ಮನುಷ್ಯ, ನಾನು ಅವರಿಗೆ ನಮ್ಮ ಐನೂರು ರೈತರು ಸತ್ತಿದ್ದಾರೆ ಎಂದಾಗ, ನನಗಾಗಿ ಸಾವನ್ನಪ್ಪಿದ್ದಾರಾ ಎಂದು ಕೇಳಿದರು. ಇದಕ್ಕೆ ನಾನು ನೀವು ನಡೆಸುತ್ತಿರುವ ರಾಜಾಡಳಿತದಿಂದ ಸತ್ತಿದ್ದಾರೆ ಎಂದೆ. ನಂತರ ನಮ್ಮ ನಡುವೆ ವಾಗ್ವಾದ ನಡೆಯಿತು, ಆಗ ಅವರು ನೀವು ಅಮಿತ್ ಶಾ ಜೊತೆ ಮಾತನಾಡಿ ಎಂದರು. ದೇಶದ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಈ ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಂತಹ ಮಾತುಗಳನ್ನು ಹೇಳುವ ಧೈರ್ಯ ಮಾಡಿಲ್ಲ  ಎಂದು ಮೋದಿ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

ಮಲಿಕ್ ಅವರ ಆರೋಪದ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್‌  ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಲಿಕ್ ಬಹಿರಂಗಪಡಿಸಿರುವ ವಿಷಯದ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ.

- Advertisement -

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ರೈತರ ವಿಷಯದಲ್ಲಿ ಪ್ರಧಾನಿ ಮೋದಿ ದುರಹಂಕಾರಿ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅವರು ದೇಶದ ಕ್ಷಮೆಕೋರಬೇಕು. ಗೃಹ ಸಚಿವ ಅಮಿತ್ ಶಾ ಅವರೇ ಪ್ರಧಾನಿಯನ್ನು ಮಾನಸಿಕ ಅಸ್ವಸ್ಥ ಎಂಬಂತೆ ಬಿಂಬಿಸಿದ್ದಾರೆ. ಸಂವಿಧಾನದ ಪ್ರಮುಖರೇ ಇಂತಹ ಮಾನಹಾನಿಕಾರಕ ನಿಂದನೆಯಲ್ಲಿ ತೊಡಗುವುದೆಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.



Join Whatsapp