‘ವಠಾರದ ಮಾವಿನ ಮರಕ್ಕೆ ಊರಿಡೀ ಮಾಲಕರು !’

Prasthutha|

► ಮಾಧ್ಯಮಗಳ TRP ಹಪಾಹಪಿಗೆ ಹಿಡಿದ ಕೈಗನ್ನಡಿ

- Advertisement -

ಪ್ರಚಾರ ಮತ್ತು ಟಿ ಆರ್ ಪಿ ಹಪಾಹಪಿಗೆ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಎನ್ನುವ ಹಲವರ ಆರೋಪಗಳ ಮಧ್ಯೆಯೇ ಕನ್ನಡದ ಕೆಲ ಸುದ್ದಿ ವಾಹಿನಿಗಳು ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ರಾಜ್ಯ ಸರಕಾರ ಮಾಸ್ಕ್ ಹಾಕದವರಿಗೆ ಈ ಮೊದಲು ವಿಧಿಸಿದ್ದ ದಂಡದ ಮೊತ್ತವನ್ನು ನಿನ್ನೆ 1000 ರೂಪಾಯಿಗಳಿಂದ 250ಕ್ಕೆ ಇಳಿಸಿತ್ತು. ಮಾಸ್ಕ್ ಹಾಕಲು ಮರೆಯುವ ಸಾಮಾನ್ಯ ನಾಗರಿಕರ ಪಾಲಿಗೆ ಇದೊಂದು ಸಂತೋಷದ ಸುದ್ದಿಯಾದರೂ, ರಾಜ್ಯ ಸರಕಾರದ ಹೊಸ ನಿರ್ಧಾರ ಅದು ನಮ್ಮದೇ “ಸಾಧನೆ” ಎಂಬಂತೆ ನಾಲ್ಕು ಚಾನೆಲ್ ಗಳು ಪ್ರಚಾರ ಪಡೆದು ಬೀಗಿವೆ. ಈ ಎಲ್ಲಾ ಚಾನೆಲ್ ವರದಿಗಳ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿ ಜನರು “ ವಠಾರದ ಮಾವಿನ ಮರಕ್ಕೆ ಊರಿಡೀ ಮಾಲಕರು” ಎಂದು ಟ್ರೋಲ್ ಮಾಡಿದ್ದಾರೆ.

ರಾಜ್ಯ ಸರಕಾರದ ದಂಡದ ದರದಲ್ಲಿ ಕಡಿತಗೊಳಿಸಿದ್ದನ್ನು ಟಿವಿ9, “ TV9 ನ ನಿರಂತರ ವರದಿಗೆ ಮಣಿದು ದಂಡ ಕಡಿಮೆ ಮಾಡಿದ ಸರ್ಕಾರ” ಎಂದು ವರದಿ ಮಾಡಿದ್ದರೆ, ಸುವರ್ಣ ಚಾನೆಲ್, “ಸುವರ್ಣ ವರದಿ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ” ಎಂದು ಬಿತ್ತರಿಸಿದೆ. ಇದೇ ವೇಳೆ ಪಬ್ಲಿಕ್ ಟಿವಿ, “ಪಬ್ಲಿಕ್ ಚಾಲೆಂಜ್ ಗೆ ಮಣಿದ ಸರ್ಕಾರ” ಎನ್ನುತ್ತಾ ಒಂದು ಹೆಜ್ಜೆ ಮುಂದಿಟ್ಟಿದೆ. ಇತರರಿಗೆ ತಾನೇನೂ ಕಡಿಮೆಯಿಲ್ಲ ಎನ್ನುತ್ತಾ ದಿಗ್ವಿಜಯ ಟಿವಿ ಕೂಡಾ ರಂಗ ಪ್ರವೇಶ ಮಾಡಿದ್ದು, ಅದು, “ದಿಗ್ವಿಜಯ ನ್ಯೂಸ್ ವರದಿಗೆ ಎಚ್ಚೆತ್ತ ಸರಕಾರ”  ಎಂದು ವರದಿ ಮಾಡಿತ್ತು.  ಇವೆಲ್ಲಾ ವರದಿಗಳ ಸ್ಕ್ರೀನ್ ಶಾಟ್ ಗಳು ಇದೀಗ ವೈರಲ್ ಆಗುತ್ತಿದೆ.

- Advertisement -

ಒಟ್ಟಿನಲ್ಲಿ ಜನ ಸಾಮಾನ್ಯರ ಒಳಿತಿಗೆ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರವೊಂದನ್ನು ಈ ಎಲ್ಲಾ ಸುದ್ದಿ ಮಾಧ್ಯಮಗಳು ನಾ ಮುಂದು ತಾ ಮುಂದು ಎನ್ನುತ್ತಾ ಲಾಭ ಗಿಟ್ಟಿಸುವ ಕಾಯಕಕ್ಕೆ ಕೈ ಹಾಕಿದೆ.

Join Whatsapp