ಸ್ಯಾನ್ ಫ್ರಾನ್ಸಿಸ್ಕೋ: ಇನ್ಮುಂದೆ ಸಾಮಾನ್ಯ ಬಳಕೆದಾರರಿಗೆ Twitter Inc ಉಚಿತವಾಗಿದ್ದು, ಸರ್ಕಾರಿ ಮತ್ತು ವಾಣಿಜ್ಯಕ್ಕಾಗಿ ಬಳಸುವವರಿಗೆ ಸ್ವಲ್ಪ ಶುಲ್ಕವನ್ನು ವಿಧಿಸಲಾಗುವುದು ಎಂದು ವಿಶ್ವದ ಶ್ರೀಮಂತ ಉದ್ಯಮಿ, ಟ್ವಿಟ್ಟರ್ ಒಡೆಯ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಈ ಕುರಿತು ತನ್ನ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಟ್ವಿಟ್ಟರ್ ಯಾವಾಗಲೂ ಸಾಮಾನ್ಯ ಬಳಕೆದಾರರಿಗೆ ಉಚಿತವಾಗಿರುತ್ತದೆ ಮತ್ತು ವಾಣಿಜ್ಯ/ ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ವೆಚ್ಚ ತಗಲುತ್ತದೆ ಎಂದು ತಿಳಿಸಿದ್ದಾರೆ.
ಟ್ವಿಟ್ಟರ್ ಗೆ ಮಹತ್ವದ ಬದಲಾವಣೆಗೆ ತರುವ ಕುರಿತು ಟೆಸ್ಲಾ ಮುಖ್ಯಸ್ಥ, ಮಸ್ಕ್ ಕರಡು ಪ್ರತಿಯೊಂದನ್ನು ರಚಿಸಲು ಸೂಚಿಸಿದ್ದರು. ಇತ್ತೀಚೆಗೆ ಟ್ವಿಟ್ಟರ್ ಅನ್ನು ತನ್ನ ಕಂಪೆನಿಗೆ ಸೇರಿಸಿದ ಬಳಿಕ ಅವರು ಟ್ವಿಟ್ಟರ್ ನಲ್ಲಿ ಹೊಸ ವೈಶಿಷ್ಟ್ಯಗಳೊಂದಿಗಿನ ವೇದಿಕೆಯನ್ನು ವರ್ಧಿಸಲು, ವಿಶ್ವಾಸವನ್ನು ಹೆಚ್ಚಿಸಲು ಮತ್ತು ಪ್ರತಿಯೊಬ್ಬರ ಟ್ವಿಟ್ಟರ್ ಖಾತೆ ಬಳಕೆಗೆ ಮುಕ್ತವಾಗಿಸಲು ಬಯಸುವುದಾಗಿ ತಿಳಿಸಿದ್ದಾರೆ.
ಕಳೆದ ತಿಂಗಳು ಟ್ವಿಟರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಮಸ್ಕ್ ಟ್ವಿಟರ್ ಬ್ಲೂ ಪ್ರೀಮಿಯಂ ಚಂದಾದಾರಿಕೆ ಸೇವೆಗೆ ಅದರ ಬೆಲೆಯನ್ನು ಕಡಿತಗೊಳಿಸುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ಸೂಚಿಸಿದ್ದರು.