ಸನಾತನ ಧರ್ಮ ಸಭೆಯಲ್ಲಿ ಮುಸ್ಲಿಮ್ ವಿರೋಧಿ ಹೇಳಿಕೆ: ಸಂಘಟಕರಿಗೆ ಶೋಕಾಸ್ ನೋಟಿಸ್

Prasthutha|

ಅಲಿಘರ್: ಉತ್ತರ ಪ್ರದೇಶದ ಆಲಿಘರ್ ನಲ್ಲಿ ಆಯೋಜಿಸಲಾಗಿದ್ದ ಸನಾತನ ಧರ್ಮ ಸಭೆಯಲ್ಲಿ ಭಾಷಣಕಾರರು ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂಘಟಕರಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

- Advertisement -

ಅಲಿಘರ್ ನ ರಾಮಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ದ್ವೇಷ ಭಾಷಣಕ್ಕೆ ಕುಖ್ಯಾತ ಹೊಂದಿರುವ ಯತಿ ನರಸಿಂಹಾನಂದ್ ಮತ್ತು ಕಾಳಿಚರಣ್ ಮಹಾರಾಜ್ ಭಾಗವಹಿಸಿದ್ದರು. `ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ದೇಶವು ದೊಡ್ಡ ಅಪಾಯವನ್ನು ಎದುರಿಸುತ್ತಿದೆ, ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಸಮಸ್ಯೆ ನಿವಾರಣೆಗೆ ಸೂಕ್ತ ಪರಿಹಾರ’ ಎಂದು ಕಾಳಿಚರಣ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

“2029 ರ ವೇಳೆಗೆ ಭಾರತವು ಮುಸ್ಲಿಂ ಪ್ರಧಾನಿಯನ್ನು ಹೊಂದುವ ಮತ್ತು ಹಲವು ರಾಜ್ಯಗಳು ಮುಸ್ಲಿಂ ಮುಖ್ಯಮಂತ್ರಿಗಳನ್ನು ಹೊಂದುವ ನಿಜವಾದ ಸಾಧ್ಯತೆಯಿದೆ” ಎಂದು ಈ ಕಾರ್ಯಕ್ರಮದಲ್ಲಿ ನರಸಿಂಹಾನಂದ ಹೇಳಿದ್ದರು.

- Advertisement -

ಈ ಕಾರ್ಯಕ್ರಮದಲ್ಲಿ ಆಹಾರ ವಿತರಣೆ ಮತ್ತು ಅರ್ಚಕರ ಸಮಾರಂಭಕ್ಕೆ ಮಾತ್ರ ಅನುಮತಿ ಪಡೆಯಲಾಗಿತ್ತು. ಆಯುಧ ಕೊಂಡೊಯ್ಯುವುದನ್ನು ನಿಷೇಧಿಸಿದ್ದರೂ ಕಾರ್ಯಕ್ರಮದಲ್ಲಿ ಖಡ್ಗಗಳನ್ನು ಝಳಪಿಸಿರುವುದು ಕಂಡು ಬಂದಿದ್ದು, ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡಲಾಗಿತ್ತು ಎಂದು ಜಿಲ್ಲಾಡಳಿತ ತನ್ನ ನೋಟಿಸ್ ನಲ್ಲಿ ಉಲ್ಲೇಖಿಸಿದೆ.

24 ಗಂಟೆಯೊಳಗೆ ಶೋಕಾಸ್ ನೋಟಿಸ್ ಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದಲ್ಲಿ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ನೋಟಿಸ್ ನಲ್ಲಿ ಎಚ್ಚರಿಸಿದೆ.

Join Whatsapp