ಆಗ್ರಾ : ಮಥುರಾದ ಶ್ರೀಕೃಷ್ಣ ದೇವಸ್ಥಾನ ಸಮೀಪದ 13.37 ಎಕರೆಯ ಭೂಮಿಯ ಮಾಲಕತ್ವ ಮತ್ತು ಶಾಹಿ ಈದ್ಗಾ ಮಸೀದಿ ತೆರವುಗೊಳಿಸಲು ಕೋರಿದ ಮೇಲ್ಮನವಿ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಅಲ್ಲಿನ ಶಾಹಿ ಈದ್ಗಾ ನಿರ್ವಹಣಾ ಟ್ರಸ್ಟ್ ಸಮಿತಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಕೃಷ್ಣ ಹುಟ್ಟಿದ ಸ್ಥಳದಲ್ಲೇ ಮಸೀದಿಯಿದೆ. ಅಲ್ಲದೆ, 13.37 ಎಕರೆ ಭೂಮಿಯ ಮಾಲಕತ್ವ ನೀಡಬೇಕೆಂದು ಕೋರಿ ದೆಹಲಿ ನಿವಾಸಿಯೊಬ್ಬರು ಸೇರಿದಂತೆ ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಮತ್ತು ಇತರ ಐವರು ಪ್ರಕರಣ ದಾಖಲಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮಸೀದಿ ನಿರ್ವಹಣಾ ಟ್ರಸ್ಟ್ ನಡುವೆ 1968ರಲ್ಲಿ ನಡೆದ ಒಪ್ಪಂದವನ್ನು ರದ್ದು ಮಾಡುವಂತೆಯೂ ಅವರು ಕೋರಿದ್ದಾರೆ.
ಮೇಲ್ಮನವಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ಸಮಿತಿ ಪ್ರತಿಪಾದಿಸಿದೆ. ಎರಡೂ ಕಡೆಗಳ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜ.11ಕ್ಕೆ ಮುಂದೂಡಿದೆ.