ತಿರುವನಂತಪುರ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥೂರ್ ಗ್ರಾಮ ಪಂಚಾಯ್ತಿಗೆ ಹೋಗುವ ಗ್ರಾಮಸ್ತರು ಅಥವಾ ಫಲಾನುಭವಿಗಳು ಪಂಚಾಯ್ತಿಯ ಅಧಿಕಾರಿಗಳು , ಜನಪ್ರತಿನಿಧಿಗಳನ್ನು ಸರ್, ಮೇಡಂ ಎಂದು ಕರೆಯುವುದನ್ನು ನಿಷೇಧಿಸಲಾಗಿದೆ. ಇನ್ನು ಮುಂದೆ ಹೆಸರು ಅಥವಾ ಪದನಾಮದಿಂದ(ಹುದ್ದೆ) ಕರೆಯಬೇಕೆಂಬ ನಿಯಮವನ್ನು ಜಾರಿಗೆ ತರುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ವಸಾಹತುಶಾಹಿ ಕಾಲದಲ್ಲಿ ಗೌರವವದ ಹೆಸರಲ್ಲಿ ಬಳಸುತ್ತಿದ್ದ ಈ ಪದಗಳ ಬಳಕೆಯನ್ನು ನಿಷೇಧಿಸಿ ಜನಸಾಮಾನ್ಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಪರಸ್ಪರ ಪ್ರೀತಿ,ವಿಶ್ವಾಸದ ಬಾಂಧವ್ಯ ವೃದ್ಧಿಸುವುದಕ್ಕಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಇಂಥ ಪದಗಳ ಬಳಕೆ ನಿಷೇಧಿಸಿದ ದೇಶದ ಮೊದಲ ಗ್ರಾಮ ಪಂಚಾಯ್ತಿ ಎಂದು ಮಾಥೂರ್ ಗ್ರಾಮ ಪಂಚಾಯ್ತಿ ಇತಿಹಾಸದ ಪುಟ ಸೇರಿದೆ. ಕಾಂಗ್ರೆಸ್ ನೇತೃತ್ವದ ಈ ಗ್ರಾಮ ಪಂಚಾಯ್ತಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸದಸ್ಯರು ಒಕ್ಕೊರಲಿನಿಂದ ಈ ಐತಿಹಾಸಿಕ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ .
ಸರ್, ಮೇಡಂ ಎಂಬ ಪದಗಳ ಬಳಕೆಯಿಂದಾಗಿ ಪಂಚಾಯ್ತಿಗೆ ಸಮಸ್ಯೆಗಳನ್ನು ಹೊತ್ತು ತರುವ ಜನರು ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳ ನಡುವೆ ಸಣ್ಣದೊಂದು ಅಂತರ ಸೃಷ್ಟಿಯಾಗುತ್ತಿತ್ತು. ಹಾಗಾಗಿ ಇಂಥದ್ದೊಂದು ನಿಯಮ ಕೈಗೊಂಡಿದ್ದೇವೆ ‘ ಎಂದು ಮಾಥೂರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ ಈಗಿರುವ ಅಪೇಕ್ಷಾ ನಮೂನೆ (ಅರ್ಜಿ ನಮೂನೆ) ಎಂಬ ಪದವನ್ನು ಪದಲಿಸಿ ಆ ಜಾಗದಲ್ಲಿ ಅವತಕ್ಷ ಪತ್ರ(ಹಕ್ಕುಗಳ ಪ್ರಮಾಣಪತ್ರ) ಎಂದು ಬದಲಾಯಿಸಲು ಮಾಥೂರ್ ಪಂಚಾಯ್ತಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ‘ಅಪೇಕ್ಷಾ’ ಎಂದರೆ ಮಲಯಾಳಂ ಭಾಷೆಯಲ್ಲಿ ವಿನಂತಿ ಎಂದರ್ಥ.