ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮರಾಠ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಶ್ರೀಮಂತ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ಮರಾಠ ನಿಗಮ ಮಂಡಳಿಗೆ ಕೂಡಲೇ ಅಧ್ಯಕ್ಷರು, ನಿರ್ದೇಶಕರನ್ನು ನೇಮಿಸಬೇಕೆಂದು ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ಒತ್ತಾಯಿಸಿದೆ.
ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ನೀಡದಿದ್ದರೆ ಜನವರಿ 19 ರ ಶಿವಾಜಿ ಜಯಂತಿಯಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಮುಖಂಡರು “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆ ನಡೆಸುವುದಲ್ಲದೇ ನಗರದ ಪ್ರೀಡಂ ಪಾರ್ಕ್ ನಲ್ಲಿ ನಮ್ಮ ಬೇಡಿಕೆ ಈಡೇರುವ ತನಕ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟದಿಂದ ಹೋಟೆಲ್ ಗೋಲ್ಡ್ ಫಿಂಚ್ ನ ಬ್ಯಾಂಕೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಸಮುದಾಯದ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಾಠ ಒಕ್ಕೂಟದ ಅಧ್ಯಕ್ಷ ಶ್ಯಾಮ್ ಸುಂದರ್ ಗಾಯಕ್ ವಾಡ್, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ನಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದಿದ್ದರೆ ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುತ್ತೇವೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಚಿವ ಸ್ಥಾನದ ಜತೆಗೆ ಕಳೆದ 15 ತಿಂಗಳಿಂದ ಮರಾಠ ನಿಗಮ ಮಂಡಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಿಸಬೇಕು. ಮರಾಠ ಸಮಾಜವನ್ನು 3 ಬಿ ಯಿಂದ 2ಎ ಸೇರ್ಪಡೆ ಮಾಡಬೇಕು. ಜತೆಗೆ ಮುಂಬರುವ ವಿಧಾನಸಭೆ ನಗರ ಪಾಲಿಕೆ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಮುದಾಯಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.
ಮರಾಠ ಸಮಾಜಕ್ಕೆ ಅನ್ಯಾಯವಾದ ಕಾರಣದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೇವಲ ಮೂರು ಸಾವಿರ ಮತಗಳಿಂದ ಬಿಜೆಪಿ ಗೆದ್ದಿತ್ತು. ಹಾನಗಲ್ ವಿಧಾನಸಭೆ ಉಪ ಚುನಾವಣೆ ಹಾಗೂ ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಮರಾಠ ಸಮುದಾಯ ಬಿ.ಜೆ.ಪಿ.ವಿರುದ್ದ ಮತ ನೀಡಿ ಸೋಲಿಸಿದೆ. ಆದ್ದರಿಂದ ಮರಾಠ ಸಮುದಾಯದಕ್ಕೆ ಆದ ಆನ್ಯಾಯವನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕು ಎಂದರು.
ಬಿ.ಜೆ.ಪಿ. ಸರ್ಕಾರ ಬಂದ 24 ಗಂಟೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಅವರು 24 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಸಹ ನಮ್ಮ ಬೇಡಿಕೆ ಈಡೇರಿಲ್ಲ. ಮರಾಠ ಸಮಾಜದ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಿ 5 ತಿಂಗಳು ಕಳೆದಿದ್ದರೂ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದರಿಂದ ಮರಾಠ ಸಮಾಜ ಬಹಳವಾಗಿ ನೊಂದಿದೆ ಎಂದರು.
ಮರಾಠ ಸಮಾಜ ಬಡತನದಲ್ಲಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. 52ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಮುದಾಯ ನಿರ್ಣಾಯಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಸರ್ಕಾರಗಳು ಕೇವಲ ಆಶ್ವಾಸನೆಗಳನ್ನು ನೀಡುತ್ತಿವೆ. ಬರಿ ಆಶ್ವಾಸನೆ ನೀಡಿ ಕಾಲ ಕಳೆಯುತ್ತಿದ್ದಾರೆ.
ಉಪಾಧ್ಯಕ್ಷ ಭಾಹೂ ಸಾಹೇಬ್, ಚಿಕ್ಕೂಡಿ ಜಿಲ್ಲಾಧ್ಯಕ್ಷ ವಿನಾಯಕ ದೇಸಾಯಿ, ಗದಗ್ ಜಿಲ್ಲಾಧ್ಯಕ್ಷರಾದ ವಿನಿತಾ ಕುಮಾರ್ ಮತ್ತು ವಿಜಯಪುರ ಜಿಲ್ಲಾಧ್ಯಕ್ಷರಾದ ರಾಹುಲ್ ಜಾಧವ್ ಮತ್ತಿತರರು ಪಾಲ್ಗೊಂಡಿದ್ದರು.