ಮಸೂದ್, ಫಾಝಿಲ್ ಹತ್ಯೆ ಪ್ರಕರಣವನ್ನೂ NIA ಗೆ ವಹಿಸಿ: ಮುಸ್ಲಿಂ ಐಕ್ಯತಾ ವೇದಿಕೆ

Prasthutha|

ಸರ್ಕಾರಕ್ಕೆ 10 ದಿನಗಳ ಗಡುವು ಕೊಟ್ಟ ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ

- Advertisement -

ಮಂಗಳೂರು: ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಸಂಬಂಧ ಕೆಲ ಬೇಡಿಕೆಗಳನ್ನು ಈಡೇರಿಸಲು ಸುರತ್ಕಲ್ ನ ಮುಸ್ಲಿಂ ಐಕ್ಯತಾ ವೇದಿಕೆ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದೆ.


ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಸ್ಲಿಂ ಐಕ್ಯತಾ ವೇದಿಕೆಯ ಸುರತ್ಕಲ್ ವಲಯದ ಪದಾಧಿಕಾರಿಗಳು, ಬೆಳ್ಳಾರೆಯ ಮಸೂದ್ ಹಾಗೂ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸಬೇಕು. ಮೃತ ಮಸೂದ್ ಹಾಗೂ ಫಾಝಿಲ್ ಮನೆಗೆ ಸರಕಾರದ ಪ್ರತಿನಿಧಿ ಭೇಟಿ ನೀಡಿ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. 10 ದಿನಗಳ ಒಳಗಾಗಿ ಸರ್ಕಾರ ಬೇಡಿಕೆಯನ್ನು ಈಡೇರಿಸದಿದ್ದರೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಜಾತ್ಯತೀತ ಶಕ್ತಿಗಳನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂವರ ಹತ್ಯೆ ಪ್ರಕಣರದಲ್ಲಿ ಬಿಜೆಪಿ ಸರ್ಕಾರದ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಮುಸ್ಲಿಂ ಐಕ್ಯತಾ ವೇದಿಕೆಯ ಸುರತ್ಕಲ್ ವಲಯದ ಕಾನೂನು ಸಲಹೆಗಾರ ಉಮರ್ ಫಾರೂಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಿರುವ ಸಿಎಂ ಬೊಮ್ಮಾಯಿಯವರು, ಮಸೂದ್ ಹಾಗೂ ಫಾಝಿಲ್ ಮನೆಗೆ ಯಾಕೆ ಭೇಟಿ ನೀಡಿಲ್ಲ, ಯಾಕೆ ಪರಿಹಾರ ನೀಡಿಲ್ಲ ಎಂದು ಪ್ರಶ್ನಿಸಿದ ಉಮರ್ ಫಾರೂಕ್, ಜಿಲ್ಲೆಯಲ್ಲಿ ಮೂರು ಹತ್ಯೆ ನಡೆದಿದ್ದರೂ ಪ್ರವೀಣ್ ಹತ್ಯೆ ಪ್ರಕರಣವನ್ನು ಮಾತ್ರ ಎನ್ ಐಎ ತನಿಖೆಗೆ ನೀಡಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರಕ್ಕೆ ತಮ್ಮದೇ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಾದರೆ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರ ಬಗ್ಗೆ ನಮಗೂ ನಂಬಿಕೆ ಇಲ್ಲ ಎಂದು ಹೇಳಿದರು. ಪ್ರವೀಣ್ ಹತ್ಯೆ ಪ್ರಕಣವನ್ನು ಎನ್ ಐಎ ತನಿಖೆಗೆ ನೀಡಿದಂತೆ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.


ಫಾಝಿಲ್ ಕೊಲೆಗೆ ಏನು ಕಾರಣ ಎಂಬುದನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ ಅವರು, ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಕೆಲವು ಸೀಮಿತ ವ್ಯಕ್ತಿಗಳನ್ನು ಬಂಧಿಸಿ ಸುಮ್ಮನಾಗಿದ್ದಾರೆ. ಪೂರ್ವ ನಿಯೋಜಿತ ಹತ್ಯೆಗೆ ಸಂಚು ರೂಪಿಸಿದವರು, ಪ್ರಚೋದನೆ ಮಾಡಿ ಹತ್ಯೆ ನಡೆಸಲು ಪ್ರೇರಣೆ ನೀಡಿದವರು, ಹತ್ಯೆಗೆ ಧನ ಸಹಾಯ ನೀಡಿದವರು, ಹತ್ಯೆಯ ನಂತರ ಹಂತಕರಿಗೆ ಸಹಾಯ ಮಾಡಿದವರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯದ ಅಧ್ಯಕ್ಷ ಅಶ್ರಫ್ ಬದ್ರಿಯಾ, ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಝೀಝ್ ದಾರಿಮಿ, ಕೃಷ್ಣಾಪುರ ಮಸೀದಿಯ ಖತೀಬ್ ಉಮರ್ ಫಾರೂಕ್ ಸಖಾಫಿ, ಕೃಷ್ಣಾಪುರ ಮಸೀದಿಯ ಅಧ್ಯಕ್ಷ ಬಿ. ಮಮ್ತಾಝ್ ಅಲಿ, ಮುಸ್ಲಿಂ ಐಕ್ಯತಾ ವೇದಿಕೆಯ ಸುರತ್ಕಲ್ ವಲಯದ ಪ್ರಧಾನ ಕಾರ್ಯದರ್ಶಿ ಕೆ. ಶರೀಫ್ ಸೇರಿದಂತೆ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯದ ಎಲ್ಲಾ ಸದಸ್ಯರು, ಕೊಲೆಯಾದ ಫಾಝಿಲ್ ತಂದೆ ಉಮರ್ ಫಾರೂಕ್ ಭಾಗಿಯಾಗಿದ್ದರು.

Join Whatsapp