‘ಗ್ಯಾಟ್ – ಬಿ’ ಪರೀಕ್ಷೆಯಲ್ಲಿ ಮರಿಯಂ ರಝಾನಾಗೆ ರಾಷ್ಟ್ರಮಟ್ಟದಲ್ಲಿ 68ನೇ ಸ್ಥಾನ

Prasthutha|

ಮಂಗಳೂರು : ರಾಷ್ಟ್ರ ಮಟ್ಟದ ಪ್ರತಿಷ್ಠಿತ ಗ್ಯಾಟ್ – ಬಿ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಮರಿಯಂ ರಝಾನಾ 68ನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಹಾಗೂ ವಿವಿ ಕಾಲೇಜು ಇತಿಹಾಸದಲ್ಲೇ ಈ ಪರೀಕ್ಷೆಯಲ್ಲಿ ಮೊದಲ ಬಾರಿ ರಝಾನಾ ಸಾಧನೆ ದಾಖಲಿಸಿದ್ದಾರೆ.

- Advertisement -

ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ನಡೆಸುವ ಗ್ರಾಜುವೇಟ್ ಆಪ್ಟಿಟ್ಯೂಡ್ ಟೆಸ್ಟ್ ಬಯೋಟೆಕ್ನಾಲಜಿ (ಗ್ಯಾಟ್ ಬಿ) 2020 ಪ್ರವೇಶ ಪರೀಕ್ಷೆ ಇದಾಗಿದ್ದು, ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಸಿದ್ಧರಾಜು ಎಂ.ಎನ್. ಮಾರ್ಗದರ್ಶನದಲ್ಲಿ ರಝಾನಾ 68ನೇ ರ್ಯಾಂಕ್ ಪಡೆದಿದ್ದಾರೆ.

ಗ್ಯಾಟ್ ಬಿ ಪ್ರವೇಶ ಪರೀಕ್ಷೆ ಬರೆಯಲು ಅಡ್ಡಿಯಾಗಬಹುದಾಗಿದ್ದ ಅ.3ರ ಅಂತಿಮ ಪದವಿಯ ಪ್ರಾಣಿಶಾಸ್ತ್ರ ಪರೀಕ್ಷೆಯನ್ನು ಮುಂದೂಡುವಂತೆ ರಝಾನಾ ಮನವಿ ಮಾಡಿದ್ದರು. ಅದಕ್ಕೆ ಸ್ಪಂಧಿಸಿದ್ದ ವಿವಿಯೂ ಪರೀಕ್ಷೆ ಮುಂದೂಡಿ ಸಹಕರಿಸಿತ್ತು.

- Advertisement -

ಫರೀದಾಬಾದ್ ರೀಜನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ನಡೆಸುವ ದೇಶದ ಕೆಲವೇ ಸಂಸ್ಥೆಗಳಲ್ಲಿ ಲಭ್ಯವಿರುವ ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲಿತ ಸ್ನಾತಕೋತ್ತರ ಕೋರ್ಸ್ ಗಳಿಗೆ ನಡೆಸುವ ಅರ್ಹತಾ ಪರೀಕ್ಷೆ ಗ್ಯಾಟ್ ಬಿ ಆಗಿದೆ. ಇಲ್ಲಿನ ರ್ಯಾಂಕ್ ಆಧರಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಕಲಿಕೆಗೆ ಅವಕಾಶ ನೀಡುತ್ತದೆ.

ಡಾ. ಸಿದ್ದರಾಜು ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದ ಇನ್ನೋರ್ವ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ರಕ್ಷಾ ಬೇಳ ಬೇಸಿಗೆ ಸಂಶೋಧನಾ ವಿದ್ಯಾರ್ಥಿವೇತನ 2019ಕ್ಕೆ ಆಯ್ಕೆಯಾಗಿದ್ದರು. ಅವರು 15,000 ವಿದ್ಯಾರ್ಥಿ ವೇತನದೊಂದಿಗೆ ಹೈದರಾಬಾದ್ ವಿವಿಯಲ್ಲಿ ಎರಡು ತಿಂಗಳು ಅಧ್ಯಯನ ನಡೆಸಿದ್ದರು. ಇದೂ ವಿವಿ ಕಾಲೇಜು ಇತಿಹಾಸದಲ್ಲಿ ಮೊದಲ ಸಾಧನೆಯಾಗಿತ್ತು.

ಮರಿಯಂ ರಝಾನಾಗೆ ದೆಹಲಿಯ ನೆಹರೂ ವಿವಿ ಅವಕಾಶ ನೀಡಿದೆ. ಭವಿಷ್ಯದಲ್ಲಿ ಭಾರತೀಯ ಅರಣ್ಯ ಸೇವೆಗೆ ಸೇರುವ ಗುರಿ ರಝಾನಾ ಹೊಂದಿದ್ದಾರೆ.  

Join Whatsapp