ಬೆಂಗಳೂರು: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಸಮ್ಮತಾರ್ಹವಲ್ಲ, ಹೈಕೋರ್ಟ್ ನಿಂದ ಈ ರೀತಿಯ ತೀರ್ಪು ಬಂದಿರುವುದರಿಂದ ನಮಗೆ ಖೇದವಿದೆ ಎಂಬುದನ್ನು ಅಭಿವ್ಯಕ್ತಿಪಡಿಸಲು ಮಾರ್ಚ್ 17ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಮುಖಂಡ ಅಕ್ಬರಲಿ ಉಡುಪಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು. ಮಾತ್ರವಲ್ಲ. ರಾಜ್ಯದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಪ್ರಥಮ ಹಂತದಲ್ಲಿ ನಾಳೆ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಎಲ್ಲಾ ಮುಸ್ಲಿಮ್ ಸಂಸ್ಥೆಗಳು, ಶಾಲಾ ಕಾಲೇಜುಗಳು, ಅಂಗಡಿ ಮುಗ್ಗಟ್ಟು ಬಂದ್ ಆಗಲಿವೆ, ವಿದ್ಯಾರ್ಥಿಗಳು, ವಕೀಲರು, ವೈದ್ಯರು, ಇತರ ನೌಕರರು ನಾಳೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಅವರು ತಿಳಿಸಿದರು.
ಇದು ಶಾಂತಿಯುತ ಬಂದ್ ಆಗಿದ್ದು, ಮೆರವಣಿಗೆ, ಜಾಥಾ ಇರುವುದಿಲ್ಲ. ಬಲವಂತದ ಬಂದ್ ಮಾಡುವಂತಿಲ್ಲ. ಯುವಕರು ರಸ್ತೆಗೆ ಇಳಿಯುವಂತಿಲ್ಲ ಎಂದು ಸೂಚಿಸಿದ ಅವರು, ನಮ್ಮ ದುಃಖವನ್ನು ವ್ಯಕ್ತಪಡಿಸಲು ಈ ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದರು.