ಮಣ್ಣಾರ್ ಕ್ಕಾಡ್ ಡಬಲ್ ಮರ್ಡರ್ ಪ್ರಕರಣ: ಮುಸ್ಲಿಂ ಲೀಗ್ ನ 25 ಕಾರ್ಯಕರ್ತರಿಗೆ ಎರಡು ಜೀವಾವಧಿ ಶಿಕ್ಷೆ

Prasthutha|

ಪಾಲಕ್ಕಾಡ್ : ಕಾಞಿರಾಪುಝ  ಕಲ್ಲಾಂಕುಝಿಯಲ್ಲಿ ನಡೆದ ಇಬ್ಬರು ಸುನ್ನಿ ಕಾರ್ಯಕರ್ತರ ಕೊಲೆ ಪ್ರಕರಣದ ಎಲ್ಲಾ 25 ಆರೋಪಿಗಳಿಗೆ ತಲಾ 50,000 ರೂ.  ದಂಡ ಮತ್ತು ಎರಡು ಜೀವಾವಧಿ ಶಿಕ್ಷೆ ವಿಧಿಸಿ ಪಾಲಕ್ಕಾಡ್ ಜಿಲ್ಲಾ ನ್ಯಾಯಾಂಗ ತ್ವರಿತ ನ್ಯಾಯಾಲಯದ ನ್ಯಾಯಾಧೀಶರು  ಆದೇಶ ಹೊರಡಿಸಿದರು. ಕೊಲೆಯಾದ ಏಳು ವರ್ಷಗಳ ನಂತರ ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾಗಿತ್ತು.

- Advertisement -

2013ರ ನವೆಂಬರ್ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಕಲ್ಲಾಂಕುಝಿಯ ಪಳ್ಳತ್ತ್ ಮನೆಯ ದಿವಂಗತ ಮುಹಮ್ಮದ್ ಹಾಜಿ ಅವರ ಪುತ್ರರಾದ ಕುಞಿಹಂಝ ಮತ್ತು ನೂರುದ್ದೀನ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಮತ್ತೊಬ್ಬ ಸಹೋದರ ಕುಞಿಮುಹಮ್ಮದ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಎಲ್ಲಾ 26 ಮಂದಿ ಮುಸ್ಲಿಂ ಲೀಗ್ ನೊಂದಿಗೆ ಸಂಬಂಧ ಹೊಂದಿದ್ದವರು ಹಾಗೂ ಸಕ್ರಿಯ ಕಾರ್ಯಕರ್ತರಾಗಿದ್ದರು. ಈ ಪ್ರಕರಣದಲ್ಲಿದ್ದ 27 ಆರೋಪಿಗಳಲ್ಲಿ ಒಬ್ಬರು ನಿಧನರಾದರು. ಇನ್ನೊಬ್ಬ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದಾನೆ. ಕಾಞಿರಾಪುಝ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಚೋಲಾಟ್ಟಿಲ್ ಸಿದ್ದೀಖ್ ಎಂಬಾತ ಮೊದಲ ಆರೋಪಿಯಾಗಿದ್ದಾನೆ.

ಬಂಧಿತ  ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ತಮ್ಮ ಲೀಗ್ ನಾಯಕರೊಂದಿಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವುದು 0ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆರೋಪಿಗಳು ರಾಜಕೀಯ ಸಹಾಯ ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಉಂಟಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಸಾಕ್ಷಿಗಳಿಗೆ ಪದೇ ಪದೇ ಬೆದರಿಕೆ ಹಾಕಿ ಪ್ರಕರಣವನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ ಐವರು ಆರೋಪಿಗಳ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಪ್ರಕರಣದ ವಿಚಾರಣೆ ಅನಿರ್ದಿಷ್ಟಾವಧಿಗೆ ವಿಳಂಬವಾಗಿದ್ದರಿಂದ ಸಂತ್ರಸ್ತರ ಕುಟುಂಬ ಸದಸ್ಯರು ಮತ್ತೆ ಹೈಕೋರ್ಟ್ ಮೊರೆ ಹೋದರು. ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತು. ಈ ಪ್ರಕರಣದಲ್ಲಿ ಸುಮಾರು 90 ಸಾಕ್ಷಿಗಳಿವೆ.

- Advertisement -

ನೂರುದ್ದೀನ್ ಅವರು ಎಸ್ ವೈ ಎಸ್ ಕಲ್ಲಾಂಕುಝಿ ಘಟಕದ ಕಾರ್ಯದರ್ಶಿಯಾಗಿದ್ದರು. ಆರೋಪಿಗಳನ್ನು ರಕ್ಷಿಸಲು ರಾಜಕೀಯ ಮಟ್ಟದಿಂದ ಒತ್ತಡವಿದ್ದರೂ, ಜನರ ತೀವ್ರ ಪ್ರತಿಭಟನೆಯಿಂದಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಲು ನಿರ್ಧರಿಸಿದರು. ಕಲ್ಲಂಕುಝಿ ಸುನ್ನಿ ಜುಮಾ ಮಸೀದಿಯಲ್ಲಿ ತನಲ್ ಎಂಬ ಸಂಘಟನೆಯು ಅಕ್ರಮವಾಗಿ ಹಣ ಸಂಗ್ರಹಿಸಿರುವುದರ ವಿರುದ್ಧ ವಕ್ಫ್ ಮಂಡಳಿಯಿಂದ ಕುಞಿಹಂಝ ತೀರ್ಪು ಪಡೆದಿದ್ದರು. ಇದು ಕೊಲೆಯ ಹಿಂದಿನ ಪ್ರಮುಖ ಕಾರಣ ಎನ್ನಲಾಗಿದೆ.



Join Whatsapp